ತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದ ಶೀರೂರು ಶ್ರೀ
ಉಡುಪಿ, ಜುಲೈ.20: ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಶ್ರೀಪಾದರು ಸಾವನ್ನಪ್ಪಿದ ಬಳಿಕ ಉದ್ಭವಿಸಿದ ಪ್ರಮುಖ ಪ್ರಶ್ನೆ ಅಂದರೆ ಅವರ ಉತ್ತರಾಧಿಕಾರಿ ಯಾರು ಎಂಬುದು. ಶೀರೂರು ಶ್ರೀಗಳು ತಮ್ಮ ಜೀವಿತಾವಧಿಯಲ್ಲೇ ಉತ್ತರಾಧಿಕಾರಿ ಆಯ್ಕೆ ಮಾಡಿದ್ದರು ಎಂಬ ಅಂಶ ಇದೀಗ ಬಯಲಾಗತೊಡಗಿದೆ.
ಸೋದೆ ಮಠದ ವಿಶ್ವವಲ್ಲಭ ತೀರ್ಥರ ಸೋದರ ಸಂಬಂಧಿಯೊಬ್ಬರನ್ನು ಶಿಷ್ಯನನ್ನಾಗಿ ಸ್ವೀಕಾರ ಮಾಡಲು ಶೀರೂರು ಶ್ರೀಗಳು ಬಯಸಿದ್ದರು ಎನ್ನಲಾಗುತ್ತಿದೆ. ಕಳೆದ ಜುಲೈ 14ರಂದೇ ಘೋಷಣೆ ಮಾಡಲು ನಿರ್ಧರಿಸಿದ್ದ ಶೀರೂರು ಶ್ರೀ ಕಾರಣಾಂತರಗಳಿಂದ ಉತ್ತರಾಧಿಕಾರಿ ಘೋಷಣೆ ಮುಂದಕ್ಕೆ ಹಾಕಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೀಗ ಅವರ ನಿಧನದ ಬಳಿಕ ಸಂಪ್ರದಾಯದಂತೆ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಶ್ರೀಗಳ ಹೆಗಲಿಗೆ ಈ ಜವಾಬ್ದಾರಿ ಬಿದ್ದಿದೆ. ಮಾಧ್ಯಮದ ಜೊತೆ ಮಾತಾಡಿದ ಸೋದೆ ವಿಶ್ವವಲ್ಲಭ ಶ್ರೀಗಳು, ಶೀರೂರು ಮಠದ ಸೊತ್ತುಗಳ ಸ್ವಾಧೀಕರಣ ಆಗಬೇಕು. ಈಗ ಎಲ್ಲವೂ ಪೊಲೀಸರ ಸುಪರ್ದಿಯಲ್ಲಿದೆ.

ಪೊಲೀಸರ ಮೂಲಕ ಕಾನೂನು ಪ್ರಕಾರ ಮಾಡುತ್ತಿದ್ದೇವೆ. ಯೋಗ್ಯ ವಟುವನ್ನು ನೋಡಿ ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು. ಹಿರಿಯ ಯತಿಗಳ ಅಭಿಪ್ರಾಯವನ್ನು ಪಡೆದೇ ತೀರ್ಮಾನಿಸುತ್ತೇವೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಮೂಲಗಳ ಪ್ರಕಾರ ಈಗ ಆಷಾಢ ಮಾಸವಾದ ಕಾರಣ ಆಷಾಢ ಕಳೆದ ಬಳಿಕವಷ್ಟೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಪ್ರಾರಂಭವಾಗಲಿದೆ.












Click it and Unblock the Notifications