ನ್ಯಾಯಾಧೀಶರ ಎದುರೇ ವಕೀಲರ ಮೇಲೆ ಶೂ ಎಸೆದ ಆರೋಪಿ
ಉಡುಪಿ ಏಪ್ರಿಲ್ 14: ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಗುರುವಾರ ನ್ಯಾಯಾಧೀಶರ ಎದುರೇ ಸರ್ಕಾರಿ ವಕೀಲರ ಮೇಲೆ ಶೂ ತೂರಿದ್ದಾನೆ.
ಉಡುಪಿಯ ಪೋಕ್ಸೋ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ.
5 ವರ್ಷಗಳ ಹಿಂದೆ ಕುಂದಾಪುರ ತಾಲೂಕಿನಲ್ಲಿ ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಪೊಲೀಸರು ಬ್ರಹ್ಮಾವರ ನಿವಾಸಿ ಪ್ರಶಾಂತ ಕುಲಾಲ್ ಎಂಬಾತನನ್ನು ಬಂಧಿಸಿದ್ದರು. ಬಳಿಕ ಜಾಮೀನಿನಿಂದ ಆತ ಬಿಡುಗಡೆ ಹೊಂದಿದ್ದ.

ಬಳಿಕ ಆತನ ಮೇಲೆ ಕೊಲೆ ಪ್ರಕರಣವೊಂದರ ಆರೋಪವೂ ದಾಖಲಾಗಿತ್ತು. ಗುರುವಾರ ಸಂಜೆ ಬಾಲಕಿಯ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಆರೋಪಿಯ ಅಪರಾಧ ಹಿನ್ನೆಲೆಯನ್ನು ಉಲ್ಲೇಖಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕ ವಿಜಯ ರಾಜು ಪೂಜಾರಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ವಾದ ಮಂಡಿಸಿದ್ದರು.
ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಆರೋಪಿ ಪ್ರಶಾಂತ್ ಕುಲಾಲ್‌ಗೆ 25 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಪ್ರಶಾಂತ ಕುಲಾಲ್ ತನ್ನ ಶೂ ತೆಗೆದು ನ್ಯಾಯಾಧೀಶರ ಸಮ್ಮುಖದಲ್ಲೇ ವಿಜಯ ರಾಜು ಪೂಜಾರಿ ಅವರತ್ತ ಎಸೆದಿದ್ದಾನೆ.
ಅರೋಪಿಯ ಈ ಕೃತ್ಯ ನ್ಯಾಯಾಲಯವನ್ನು ಅವಮಾನಿಸಿದ ಪ್ರಕರಣವಾಗಿದೆ ಎಂದು ಆತನ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೋರಿಕೆಯ ಮೇರೆಗೆ ವಿಜಯ ರಾಜು ಪೂಜಾರಿ ಅವರಿಗೆ ಭದ್ರತೆ ನೀಡಲಾಗಿದೆ.












Click it and Unblock the Notifications