ಉಡುಪಿ; ಈಚಲು ಮರ ಹತ್ತಿ ಶೇಂದಿ ಇಳಿಸಿದ ಪ್ರಣಾವಾನಂದ ಸ್ವಾಮೀಜಿ
ಉಡುಪಿ, ಏಪ್ರಿಲ್ 4: ಶೇಂದಿ ಉದ್ದಿಮೆಯನ್ನು ಬೆಳೆಸಲು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಶರಣಬಸವೇಶ್ವರ ಮಠಾಧೀಶ ಪ್ರಣವಾನಂದ ಸ್ವಾಮೀಜಿ ಉಡುಪಿಯಲ್ಲಿ ಈಚಲು ಮರ ಹತ್ತಿ ಶೇಂದಿ ಇಳಿಸಿದ್ದಾರೆ. ವೃತ್ತಿಪರರಂತೆಯೇ ಮರ ಹತ್ತಿದ ಸ್ವಾಮೀಜಿ, ಮರದ ಕೊಂಬೆಗಳ ಮೇಲೇರಿ ಶೇಂದಿ ಇಳಿಸಿದ್ದಾರೆ.
ಶೇಂದಿ ಕಸುಬಿಗೆ ಬೆಂಬಲಿಸಿ ಈಚಲು ಮರ ಹತ್ತಿದ ಪ್ರಣವಾನಂದ ಸ್ವಾಮೀಜಿ, ಶೇಂದಿ ಇಳಿಸಿ ಮೂರ್ತೇದಾರ ಸಮುದಾಯಕ್ಕೆ ಸರ್ಕಾರ ನ್ಯಾಯ ನೀಡುವಂತೆ ಒತ್ತಾಯಿಸಿದ್ದಾರೆ. ಶೇಂದಿ ನಿಷೇಧದಿಂದ 25 ಸಾವಿರ ಮೂರ್ತೇದಾರರ ಕುಟುಂಬ ಬೀದಿಗೆ ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ಶೇಂದಿ ಇಳಿಸಲು ಸರ್ಕಾರ ಅವಕಾಶ ನೀಡಬೇಕು. ಜೊತೆಗೆ ಸರ್ಕಾರವೇ ದರ ನಿಗದಿಪಡಿಸಿ ಶೇಂದಿ ಖರೀದಿಸಿ ಮಾರಾಟ ಕೇಂದ್ರ ಮಾಡಬೇಕು ಎಂದು ಉಡುಪಿಯಲ್ಲಿ ರಾಣೇಬೆನ್ನೂರು ತಾಲ್ಲೂಕು ಅರೇಮಲ್ಲಾಪುರದ ಶರಣಬಸವೇಶ್ವರ ಮಠಾಧೀಶ ಪ್ರಣವಾನಂದ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.
ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಪ್ರಣವಾನಂದ ಸ್ವಾಮೀಜಿ, "ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಶೇಂದಿ ನಿಷೇಧ ಮಾಡಲಾಗಿದೆ. ಶೇಂದಿ ಮೂಲ ಕಸುಬನ್ನೇ ನಂಬಿರುವ ಮೂರ್ತೇದಾರರ ಕುಟುಂಬ ಬೀದಿಗೆ ಬಿದ್ದಿದೆ. ಸರ್ಕಾರ ಶೇಂದಿ ಇಳಿಸಲು ಅನುಮತಿ ನೀಡಬೇಕು," ಎಂದು ಒತ್ತಾಯ ಮಾಡಿದ್ದಾರೆ.

"ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 500 ಅಧಿಕ ಮೂರ್ತೇದಾರರು ಇದ್ದಾರೆ. ಮೂರ್ತೇದಾರರಿಂದ ಶೇಂದಿಯನ್ನು ಲೀಟರ್‌ಗೆ ಮೂವತ್ತು ರೂಪಾಯಿಯಂತೆ ಖರೀದಿ ಮಾಡುತ್ತಾರೆ. ಆದರೆ ಅದೇ ಒಂದು ಲೀಟರ್ ಶೇಂದಿಯನ್ನು ಮಾರಾಟಗಾರರು 150 ರೂಪಾಯಿಗೆ ಮಾರಾಟ ಮಾಡುತ್ತಾರೆ. ಹೀಗಾಗಿ ಸರ್ಕಾರ ಲೀಟರ್‌ಗೆ ನೂರು ರೂಪಾಯಿ ದರವನ್ನು ನಿಗದಿ ಮಾಡಬೇಕು. ಸರ್ಕಾರವೇ ಮೂರ್ತೇದಾರರಿಂದ ಶೇಂದಿ ಖರೀದಿ ಮಾಡಬೇಕು," ಎಂದು ಸ್ವಾಮೀಜಿ ಆಗ್ರಹಿಸಿದರು.

"ಆರ್ಯ ಈಡಿಗರ ಕುಲ ಕಸುಬು ಮೂರ್ತೇಗಾರಿಕೆ ಆಗಿದೆ. ಮಡಿವಾಳರ ಕುಲ ಕಸಬು ಬಟ್ಟೆ ಒಗೆಯುವುದಾದರೆ, ಬೋವಿ ಜನಾಂಗದವರು ಕಲ್ಲು ಒಡೆಯುತ್ತಾರೆ. ಹಾಗೆಯೇ ಆರ್ಯ ಈಡಿಗರ ಕುಲ ಕಸುಬು ಮೂರ್ತೇದಾರಿಕೆ ಆಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳೇ ಅಧಿಕ ಇದ್ದಾರೆ. ಆದರೆ ಈಡಿಗರ ಕುಲಕುಸುಬು ಉಳಿಸುವ ಬಗ್ಗೆ ಯಾರೂ ಸೊಲ್ಲೆತ್ತಿಲ್ಲ. ಸರ್ಕಾರ ಕೂಡಲೇ ಆರ್ಯ ಈಡಿಗರ ಪ್ರತ್ಯೇಕ ನಿಗಮ ಮಂಡಳಿ ಮಾಡಬೇಕೆಂದು," ಪ್ರಣಾವಾನಂದ ಸ್ವಾಮೀಜಿ ಹೇಳಿದರು.

"ಶೇಂದಿ ಮಾರಾಟಕ್ಕೆ ಸರ್ಕಾರದ ರಾಜ್ಯಾದ್ಯಂತ ಅನುಮತಿ ಮಾಡಬೇಕು. ಒಂದು ಸರ್ವೇಯ ಪ್ರಕಾರ ರಾಜ್ಯದಲ್ಲಿ ಮೂವತ್ತೆರಡು ಲಕ್ಷಕ್ಕಿಂತ ಹೆಚ್ಚು ಈಚಲು ಮರಗಳಿವೆ. ಕೆಲವು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಹೊರ ರಾಜ್ಯದಿಂದ ಶೇಂದಿಯನ್ನು ಆಮದು ಮಾಡಿಕೊಂಡು ಇಲ್ಲಿಯ ಈಚಲು ಮರವನ್ನು ಕಡಿಯಲಾಗುತ್ತದೆ. ಬೇರೆ ರಾಜ್ಯದಲ್ಲಿ ಮೂರ್ತೇದಾರರಿಗೆ ಸರ್ಕಾರದ ಪಿಂಚಣಿ ವ್ಯವಸ್ಥೆಯೂ ಇದೆ. ರಾಜ್ಯದಲ್ಲೂ ಸರ್ಕಾರ ಮೂರ್ತೇದಾರರಿಗೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು. ಸರ್ಕಾರ ಮುಂದಾಲೋಚನೆ ಮಾಡದಿದ್ದರೆ, ಇಡೀ ಈಡಿಗ ಸಮಾಜ ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ," ಎಚ್ಚರಿಕೆ ನೀಡಿದರು.












Click it and Unblock the Notifications