ಉಡುಪಿಯಲ್ಲಿ ಮದ್ಯ ಖರೀದಿಗೆ ಹೆಚ್ಚಿದ ಜನ; ಅವಧಿಗೆ ಮುನ್ನವೇ ಬಂದ್ ಆಯ್ತು ವೈನ್ ಶಾಪ್
ಉಡುಪಿ, ಮೇ 04: ಇಂದು ರಾಜ್ಯದಾದ್ಯಂತ ಮದ್ಯದಂಗಡಿಗಳು ತೆರೆದಿದ್ದು, ಉಡುಪಿಯಲ್ಲೂ ಬೆಳಿಗ್ಗೆ ಸರದಿ ಸಾಲಿನಲ್ಲಿ ನಿಂತು ಜನರು ಮದ್ಯ ಖರೀದಿಸಿದರು. ಆದರೆ ಉಡುಪಿಯ ಮಾರುತಿ ವೀಥಿಕಾ ರಸ್ತೆಯಲ್ಲಿ ಒಂದು ಗಂಟೆಗೆ ಮುನ್ನವೇ ಪೊಲೀಸರು ಅಂಗಡಿಯನ್ನು ಮುಚ್ಚಿಸಿದರು.
ಉಡುಪಿಯಲ್ಲಿ ಮಧ್ಯಾಹ್ನದವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದ್ಯಕ್ಕಾಗಿ ಹೆಚ್ಚು ಜನರು ಸೇರಿದ್ದರಿಂದ ಒಂದು ಗಂಟೆಗೆ ಇನ್ನೂ ಮೂವತ್ತು ನಿಮಿಷ ಇದೆ ಎನ್ನುವಾಗಲೇ ಪೊಲೀಸರು ಉದ್ದದ ಸರತಿ ಸಾಲನ್ನು ನೋಡಿ ಮನೆಗೆ ತೆರಳುವಂತೆ ಸೂಚಿಸಿದರು. ಅಲ್ಲಿ ಸೇರಿದ್ದ ಜನರನ್ನು ಚದುರಿಸಿದರು.

ಬೇರೆ ದಾರಿಯಿಲ್ಲದೆ ಕೆಲವರು, ಮದ್ಯ ಸಿಗದೆ ನಿರಾಶರಾಗಿ ಮನೆಗೆ ತೆರಳಿದರು. ಅಂಗಡಿ ಮುಚ್ಚುವ ಸಮಯ ಹತ್ತಿರ ಬರುತ್ತಿದ್ದಂತೆ, ಧಾವಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆತು ಮುಗಿಬೀಳುವಂತಿದ್ದರು. ಹೀಗಾಗಿ ಅಂತರ ಕಾಯ್ದುಕೊಳ್ಳದವರನ್ನು ಪೊಲೀಸರು ಚದುರಿಸುವ ಮೂಲಕ ಪಾಠ ಕಲಿಸಿದರು. ಡಿವೈಎಸ್ ಪಿ ಜಯಶಂಕರ್ ನೇತೃತ್ವದಲ್ಲಿ ನಗರದ ಮಾರುತಿ ವೀಥಿಕಾದಲ್ಲಿನ ವೈನ್ ಶಾಪ್ ಅನ್ನು ಅವಧಿಗೂ ಮುನ್ನವೇ ಬಂದ್ ಮಾಡಿಸಲಾಯಿತು.












Click it and Unblock the Notifications