ಉಡುಪಿ: ಮಾನಸಿಕ ಕಿರುಕುಳ ಹಿನ್ನಲೆ; ಗುಂಡಿಕ್ಕಿಕೊಂಡು ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ
ಉಡುಪಿ, ಏಪ್ರಿಲ್ 29: ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೆಬಲ್ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಆದಿ ಉಡುಪಿ ಪ್ರೌಢಶಾಲೆಯಲ್ಲಿ ನಡೆದಿದೆ. ರಾಜೇಶ್ ಕುಂದರ್ ಎಂಬ ಕಾನ್‌ಸ್ಟೆಬಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜೇಶ್ ಕುಂದರ್, ಕರ್ತವ್ಯದಲ್ಲಿ ಇರುವಾಗಲೇ ರೈಫಲ್‌ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಕೇಂದ್ರದ ಭದ್ರತೆಯಲ್ಲಿದ್ದಾಗ ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ರಾತ್ರಿಯಿಂದಲೇ ಕರ್ತವ್ಯನಿರತರಾಗಿದ್ದರು.
ಶುಕ್ರವಾರ ಬೆಳಗಿನ ಜಾವ ತನ್ನ ಕರ್ತವ್ಯಕ್ಕೆಂದು ನೀಡಿದ್ದ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ರಾಜೇಶ್ ಆತ್ಮಹತ್ಯೆ ಮಾಡಿದ್ದಾರೆ. ರೈಫಲ್ ಅನ್ನು ತನ್ನ ಕುತ್ತಿಗೆಗೆ ಗುರಿಯಾಗಿರಿಸಿ ಗುಂಡು ಹೊಡೆದುಕೊಂಡ ಪರಿಣಾಮ, ರಾಜೇಶ್ ಮುಖ ಹಾಗೂ ತಲೆಯ ಒಂದು ಭಾಗ ಸಿಡಿದು ಗುಂಡು ಹೊರಬಂದಿದೆ. ತಲೆಯ ಭಾಗ ಛಿದ್ರವಾಗಿದ್ದು, ಮುಖದ ಗುರುತು ಪತ್ತೆಯಾಗದಷ್ಟು ಹಾನಿಯಾಗಿದೆ. ಮೃತ ರಾಜೇಶ್ ಕುಂದರ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಿವಾಸಿಯಾಗಿದ್ದು, ಪತ್ನಿ, ಒಂದು ಗಂಡು ಹಾಗೂ ಹೆಣ್ಣು ಮಕ್ಕಳು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ಇಲಾಖೆಯ ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕರ್ತವ್ಯನಿರತ ಪೊಲೀಸ್ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆ ಕುಟುಂಬದವರು ಸ್ಥಳಕ್ಕೆ ಬಂದ ನಂತರವೇ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ, ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮಣಿಪಾಲ ಹಾಗೂ ಮಂಗಳೂರಿನ ಎಫ್ಎಸ್‌ಎಲ್ ತಂಡ ಬಂದು ಶವದ ಮಹಜರು ನಡೆಸಿದ್ದಾರೆ.
ತಿಂಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ, ರಾಜೇಶ್ ಹೋದ್ಯೋಗಿಗಳೊಂದಿಗೆ ಜಗಳವಾಡಿದ್ದರು. ಮೂವರು ಪೊಲೀಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇಲಾಖೆಯಲ್ಲಿನ ಡ್ಯೂಟಿ ಟೈಮ್ ಹಾಗೂ ಸೀನಿಯಾರಿಟಿ ಸಂಬಂಧ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಈ ಗಲಾಟೆಗೆ ಸಂಬಂಧಿಸಿದಂತೆ ರಾಜೇಶ್ ಸೇರಿದಂತೆ ಮೂವರನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಅಮಾನತ್ತಿನ ಅವಧಿ ಪೂರೈಸಿಕೊಂಡು ಗುರುವಾರವಷ್ಟೇ ರಾಜೇಶ್ ಕುಂದರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಆಗಿರುವ ಇವರನ್ನು ಮಲ್ಪೆ ಠಾಣೆಯ ಮೂಲಕ ಆದಿಉಡುಪಿ ಶಾಲೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಕರ್ತವ್ಯದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಉಡುಪಿ ಪೊಲೀಸ್ ಇಲಾಖೆ ದಿಗ್ಭ್ರಮೆಗೆ ಒಳಗಾಗಿದೆ. ಸಹೋದ್ಯೋಗಿಗಳು ಹೇಳುವಂತೆ ಸೂಕ್ಷ್ಮ ಮನಸ್ಸಿನವರಾದ ರಾಜೇಶ್, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್ ಮೈಂಡೆಡ್ ಅಲ್ಲ. ಈ ಆತ್ಮಹತ್ಯೆ ಆಘಾತ ತಂದಿದೆ ಎಂದು ನಿವೃತ್ತ ಪೊಲೀಸ್ ಸಿಬ್ಬಂದಿಗಳು ಹೇಳಿದ್ದಾರೆ.
ಇಲಾಖೆಯೊಳಗಿನ ಅವ್ಯವಸ್ಥೆಯಿಂದಲೇ ಈ ರೀತಿ ಆಗುತ್ತಿದೆ. ಮೇಲಧಿಕಾರಿಗಳಿಗೆ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳ ಬಗ್ಗೆ ಸ್ವಲ್ಪವೂ ಕನಿಕರವಿಲ್ಲ. ಬ್ರಿಟಿಷರ ಕಾಲದ ಆರ್ಡರ್ಲಿಯಂತಹ ವ್ಯವಸ್ಥೆ ಇವತ್ತಿಗೂ ಜಾರಿಯಲ್ಲಿದೆ. ಕರ್ನಾಟಕದ ಪೊಲೀಸರು ಕನಿಷ್ಠ ಸಂಬಳಕ್ಕೆ ದುಡಿಯುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗಳು ಕೂಡ ಹೆಚ್ಚಿವೆ. ಇಲಾಖೆಯೊಳಗಿನ ಇಂತಹ ಸಮಸ್ಯೆಗಳಿಂದಲೇ ನೊಂದು ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಾ ನಿವೃತ್ತ ಪೊಲೀಸ್ ಸಿಬ್ಬಂದಿ ಆರೋಪ ಮಾಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications