ಮಣಿಪಾಲದಲ್ಲಿ 'ಉರಿ' ' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿಗಳು
ಉಡುಪಿ, ಮಾರ್ಚ್ 01: ಪಾಕ್ ಭಯೋತ್ಪಾದಕರು ಜಮ್ಮು ಕಾಶ್ಮೀರದ 'ಉರಿ' ಸೇನಾ ಕ್ಯಾಂಪ್ ಮೇಲೆ ನಡೆಸಿದ ರಣಹೇಡಿ ದಾಳಿ ಮತ್ತು ನಂತರ ಭಾರತೀಯ ಸೇನೆ ವೀರೋಚಿತವಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ರಹಸ್ಯವಾಗಿ ಹೆಣೆದ ಸರ್ಜಿಕಲ್ ಸ್ಟ್ರೈಕ್ ಸೇನಾ ಕಾರ್ಯಾಚರಣೆ ಆಧರಿಸಿದ ಚಲನಚಿತ್ರ 'ಉರಿ' ಸೂಪರ್ ಹಿಟ್ ಆಗಿದೆ.
'ಉರಿ- ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರ ದೇಶದಲ್ಲೆಲ್ಲಾ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಇದು ಭಾರತೀಯ ಸೇನೆ ರಹಸ್ಯ ಕಾರ್ಯಾಚರಣೆ ನಡೆಸಿ ಆಧರಿಸಿ ತೆಗೆದ ಚಿತ್ರ. ಭಾರತೀಯ ಸೇನೆ ನಡೆಸಿದ ಈ ವೀರೋಚಿತ ಹೋರಾಟದ ಕುರಿತಾದ ಚಿತ್ರವನ್ನು ದೇಶದ ನಿಜವಾದ ಹಿರೋಗಳಾದ ನಮ್ಮ ಸೈನಿಕರೊಂದಿಗೆ ವೀಕ್ಷಿಸಿದರೆ ಅದರ ರೋಮಾಂಚನವೇ ಬೇರೆ.

ಈಗ ಈ ಚಿತ್ರವನ್ನು ಉಡುಪಿ ಅಷ್ಠ ಮಠಾಧೀಶರೂ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ದೇಶಭಕ್ತಿ ಮತ್ತು ದೇಶದ ಯೋಧರ ಅಭೂತಪೂರ್ವ ಸಾಹಸಗಾಥೆಯನ್ನೊಳಗೊಂಡ 'ಉರಿ' ಚಲನಚಿತ್ರವನ್ನು ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥರು ತಮ್ಮ ಶಿಷ್ಯರೊಂದಿಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ಗುರುವಾರ ಸಂಜೆ ಮಠದ ಭಕ್ತರೊಬ್ಬರು ಮಣಿಪಾಲದ ಭಾರತ್ ಸಿನೆಮಾ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನವನ್ನು ಪೇಜಾವರ ಶ್ರೀಗಳು, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರೊಂದಿಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಯುವ ಜನತೆ, ವಿದ್ಯಾರ್ಥಿಗಳನ್ನು ದೇಶಭಕ್ತಿಯತ್ತ ಸೆಳೆದಿದ್ದ 'ಉರಿ' ಚಿತ್ರ ಸನ್ಯಾಸಿಗಳನ್ನು ಮೆಚ್ಚಿಸಿದೆ.












Click it and Unblock the Notifications