ಉಡುಪಿ ಕೃಷ್ಣ ಮಠದಲ್ಲಿ ಪೇಜಾವರರಿಂದ ಐತಿಹಾಸಿಕ ಇಫ್ತಾರ್ ಕೂಟ
ಉಡುಪಿ, ಜೂನ್ 25: ಶ್ರೀ ಕೃಷ್ಣನಿಗೂ ಇಫ್ತಾರ್ ಗೂ ಯಾವ ಸಂಬಂಧ? ಆದರೆ ಶನಿವಾರ ಉಡುಪಿಯ ಒಂದಷ್ಟು ಮುಸ್ಲಿಂ ಬಾಂಧವರಿಗಾಗಿ ಇಲ್ಲಿನ ಐತಿಹಾಸಿಕ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿಗಳು ಈ ಇಫ್ತಾರ್ ಕೂಟ ಆಯೋಜಿಸಿದ್ದರು. ರಂಜಾನ್ ಮಾಸದ ಕೊನೆಯ ಉಪವಾಸವನ್ನು ಕೃಷ್ಣಮಠದ ಆವರಣದಲ್ಲಿ ಪೂರೈಸಲು ಸ್ಥಳೀಯ ಮುಸ್ಲಿಂ ಸಮುದಾಯದವರಿಗೆ ಆಹ್ವಾನ ನೀಡಿದ್ದರು. ಸ್ವಾಮೀಜಿ ಕರೆ ಸ್ವೀಕರಿಸಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಮತ್ತು ಮುಖಂಡರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ಸ್ವತಃ ಪೇಜಾವರ ಶ್ರೀಗಳೇ ಎಲ್ಲರಿಗೂ ಖರ್ಜೂರವನ್ನು ವಿತರಿಸಿದರು. ಬಳಿಕ ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಸಾಮೂಹಿಕ ನಮಾಜು ನಡೆಯಿತು. ಈ ವೇಳೆ ಮಾತನಾಡಿದ ಸ್ವಾಮೀಜಿ ನಮ: ಮತ್ತು ನಮಾಜು ಎರಡೂ ಒಂದೆ. ಇವು ಪ್ರಾರ್ಥನೆಗಿರುವ ಎರಡು ಪ್ರತ್ಯೇಕ ವಿಧಾನಗಳಷ್ಟೇ ಅಂದರು.
ಸಾಮೂಹಿಕ ಪ್ರಾರ್ಥನೆಯ ಬಳಿಕ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಒಂದು ಕಡೆ ಕರಾವಳಿಯ ಬಂಟ್ವಾಳ ಪರಿಸರ ಕೋಮು ಕಾರಣಗಳಿಗೆ ಸುದ್ದಿಯಲ್ಲಿದ್ದರೆ, ಪಕ್ಕದ ಉಡುಪಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಯಿತು.












Click it and Unblock the Notifications