ಕುಕ್ಕೆ ಸುಬ್ರಹ್ಮಣ್ಯ ವಿವಾದದ ಬಗ್ಗೆ ಪೇಜಾವರರು ಕೊಟ್ಟ ಪ್ರತಿಕ್ರಿಯೆ ಹೀಗಿದೆ...
ಉಡುಪಿ, ಅಕ್ಟೋಬರ್ 15: ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಮಠದ ವಿವಾದದ ಕುರಿತು ಉಡುಪಿ ಪೇಜಾವರ ಮಠದ ಪೇಜಾವರ ಶ್ರೀ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ದೂರಿದರು.
ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ. ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಡಬಾರದು. ಮಠದ ಗೋಶಾಲೆಗೆ ದೇವಳದ ನೀರನ್ನು ದೇವಸ್ಥಾನ ಸ್ಥಗಿತಗೊಳಿಸಿರುವುದು ಸರಿಯಲ್ಲ.

ಸರ್ಪ ಸಂಸ್ಕಾರಕ್ಕೆ ಎಲ್ಲೂ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ. ಈ ನಿಲುವಿನಿಂದ ಸಮಾಜಕ್ಕೆ ತೊಂದರೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಮಠ, ಜನರಿಗೆ ಹಾನಿಕಾರಕವಾಗಿ ವರ್ತಿಸುತ್ತಿಲ್ಲ. ಕುಕ್ಕೆ ದೇವಸ್ಥಾನ -ಮಠದ ಸಂಘರ್ಷ ಸರಿಯಲ್ಲ.
ದೇವಸ್ಥಾನಕ್ಕೆ ಸಂಪುಟ ನರಸಿಂಹ ಮಠದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡಿ ಬಗೆಹರಿಸೋಣ ಎಂದು ಹೇಳಿದರು.
ಸುಬ್ರಹ್ಮಣ್ಯ ಮಠದಿಂದ ತೊಂದರೆಯಾದರೆ ಅದನ್ನು ಸರಿಪಡಿಸೋಣ. ಸುಬ್ರಹ್ಮಣ್ಯ ಶ್ರೀಗಳ ಜೊತೆ ನಾನು ಮಾತನಾಡುತ್ತೇನೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಠಕ್ಕೆ ಗೌರವ ಸಿಗುತ್ತಿಲ್ಲ. ವಿದ್ಯಾಭೂಷಣ ಶ್ರೀ ಇದ್ದಾಗ ಇದ್ದ ಗೌರವ ಆದರೂ ಸಿಗಬೇಕು ಎಂದರು.
ಸರಕಾರದ ಪ್ರವೇಶವೇ ಗೊಂದಲಕ್ಕೆ ಕಾರಣ. ದೇವಸ್ಥಾನ, ಮಠ ಸ್ವತಂತ್ರವಾಗಿ ನಡೆಯಬೇಕು. ಎಲ್ಲಾ ಪಕ್ಷ, ಎಲ್ಲಾ ಜನರ ಸಹಕಾರ ಬೇಕು. ವಿವಾದ ಇತ್ಯರ್ಥಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಹಕರಿಸಬೇಕು. ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ಸ್ವಾಮಿಗಳ ಮನ ಒಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಲಿಮಾರು ಶ್ರೀ, ಕಾಣಿಯೂರು ಶ್ರೀ, ಸೋದೆ ಸ್ವಾಮೀಜಿ ಉಪಸ್ಥಿತರಿದ್ದರು.












Click it and Unblock the Notifications