KSR ರೈಲು ನಿಲ್ದಾಣಕ್ಕೆ ಬರುವವರೇ ಗಮನಿಸಿ: ಮೂರು ತಿಂಗಳು ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ
ಬೆಂಗಳೂರು: ಬೆಂಗಳೂರಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಪ್ರಮುಖ ಯಾರ್ಡ್ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ ಮುಂದಿನ ಕೆಲವು ತಿಂಗಳ ವರೆಗೆ ನೈರುತ್ಯ ರೈಲ್ವೆಯು ಹಲವು ರೈಲುಗಳ ಸಂಚಾರ, ಮಾರ್ಗದಲ್ಲಿ ಬದಲಾವಣೆ ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಬೆಂಗಳೂರು, ಕೇರಳ ಮತ್ತು ತಮಿಳುನಾಡು ನಡುವೆ ಸಂಚರಿಸುವ ರೈಲುಗಳ ಮತ್ತು ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ರೈಲ್ವೆ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸಲು ಈ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯುಕ್ತ ಬೆಂಗಳೂರು-ಕೇರಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹಲವು ಪ್ರಮುಖ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಮುಂದಿನ ಜುಲೈ ಮತ್ತು ಆಗಸ್ಟ್ ತಿಂಗಳ ಅವಧಿಯಲ್ಲಿ ಈ ಕಾಮಗಾರಿ ತೀವ್ರಗೊಳ್ಳಲಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದರೆ ಕೆಎಸ್‌ಆರ್ ನಿಲ್ದಾಣಕ್ಕೆ ಬಳಸುವ ಬದಲು ಕೆ.ಆರ್.ಪುರಂ, ಎಸ್‌ಎಂವಿಟಿ ಬೆಂಗಳೂರು ನಿಲ್ದಾಣ ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಮುಖ ರೈಲು ಸೇವೆಗಳು ರದ್ದಾಗಲಿವೆ.

ರದ್ದಾದ, ಭಾಗಶಃ ರದ್ದಾದ ರೈಲುಗಳ ಪಟ್ಟಿ
* ಆಗಸ್ಟ್ 1 ರಂದು ಕೆಎಸ್‌ಆರ್ ಬೆಂಗಳೂರು-ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12658)
* ಆಗಸ್ಟ್ 2ಕ್ಕೆ ಚೆನ್ನೈ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12657) ಸಂಚಾರ ಸಂಪೂರ್ಣ ರದ್ದಾಗಿದೆ.
* ಆಗಸ್ಟ್ 2 ಮತ್ತು 3 ರಂದು ಚೆನ್ನೈ-ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲಿನ ಸಂಚಾರ ರದ್ದುಗೊಳಿಸಲಾಗಿದೆ.
* ಜುಲೈ 31 ಮತ್ತು ಆಗಸ್ಟ್ 3 ರಂದು ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (26652) ಕೆಎಸ್‌ಆರ್ ಬೆಂಗಳೂರು ಬದಲಿಗೆ ಕೃಷ್ಣರಾಜಪುರಂ ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.
ಮಾರ್ಗ ಬದಲಾವಣೆ, ಉಪನಗರ ರೈಲು ಸೇವೆ ಕಡಿತ
* ಜುಲೈ 30 ರಿಂದ ಆಗಸ್ಟ್ 3 ರವರೆಗೆ ಕೇರಳದ ಕೋಝಿಕ್ಕೋಡ್- ಬೆಂಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣ ಪ್ರವೇಶಿಸುವುದಿಲ್ಲ. ಈ ರೈಲು ಯಶವಂತಪುರ, ಹೆಬ್ಬಾಳ ಮತ್ತು ಬಾಣಸವಾಡಿ ಮೂಲಕ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
* ಜುಲೈ 31 ರಿಂದ ಆಗಸ್ಟ್ 3 ರವರೆಗೆ ಚೆನ್ನೈ-ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲು ನಗರದ ಬೈಯಪ್ಪನಹಳ್ಳಿಯಿಂದಲೇ ಎಸ್‌ಎಂವಿಟಿ ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.
* ಜೋಲಾರ್‌ಪೆಟ್ಟೈ ಕಡೆಯಿಂದ ಬರುವ ಮೆಮು (MEMU) ರೈಲುಗಳ ಸಂಚಾರವನ್ನೂ ಈ ಅವಧಿಯಲ್ಲಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಕಡಿತಗೊಳಿಸಲಾಗಿದೆ.
* ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ಮೈಸೂರು-ರೇಣುಗುಂಟಾ ಎಕ್ಸ್‌ಪ್ರೆಸ್ ರೈಲು ಮತ್ತು ಹೌರಾ-ಮೈಸೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಸುದೀರ್ಘ ಮಾರ್ಗದ ರೈಲುಗಳನ್ನು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರದಂತೆ ಯಶವಂತಪುರ ಮತ್ತು ಬಾಣಸವಾಡಿ ಮಾರ್ಗಕ್ಕೆ ಬದಲಾಯಿಸಲಾಗಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಸುಗಮ ಸಂಚಾರಕ್ಕಾಗಿ ಕಾಮಗಾರಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ರದ್ದು, ಮಾರ್ಗ ಬದಲಾವಣೆಗಳು ಸಹ ಅನಿವಾರ್ಯವಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.













Click it and Unblock the Notifications