ಮಲ್ಪೆ ಮೀನುಗಾರರ ಪತ್ತೆಗೆ ಮುಂದುವರೆದ ಶೋಧಕಾರ್ಯ
ಉಡುಪಿ, ಜನವರಿ 12: ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರ್ ನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ 7 ಮಂದಿ ಮೀನುಗಾರರು ಹಾಗು ಅವರಿದ್ದ ಸುವರ್ಣ ತ್ರಿಭುಜ ಬೋಟ್ ಗಾಗಿ ಶೋಧಕಾರ್ಯ ಮುಂದುವರೆದಿದೆ. ಆದರೆ ಈ ವರೆಗೆ ನಾಪತ್ತೆಯಅಗಿರುವ ಮೀನುಗಾರರ ಅಥವಾ ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ನ ಸುಳಿವು ಲಭ್ಯವಾಗಿಲ್ಲ .
ಕಳೆದ 28 ದಿನಗಳಿಂದ ಮೀನುಗಾರರು ಸುರಕ್ಷಿತವಾಗಿ ಮರಳುವ ಬಗ್ಗೆ ವಿಶ್ವಾಸ ವಿರಿಸಿಕೊಂಡಿರುವ ಕುಟುಂಬಸ್ತರ ಆತಂಕ ದಿನೇದಿನೇ ಹೆಚ್ಚುತ್ತಿದೆ. ಪೊಲೀಸರು ಇಸ್ರೋ ನೆರವು ಕೇಳಿದ್ದಾರಾದರೂ ಈ ವರೆಗೆ ಫಲಿತಾಂಶ ಏನೂ ಇಲ್ಲದಂತಾಗಿದೆ.

ಈ ನಡುವೆ ಉಡುಪಿ ಜಿಲ್ಲಾ ಪೊಲೀಸರ ನೇತೃತ್ವದ ತಂಡ ಒಂದು ಮಲ್ಪೆಯಿಂದ ಇಬ್ಬರು ಮತ್ತು ಭಟ್ಕಳದಿಂದ ಇಬ್ಬರು ಮೀನುಗಾರರ ಜತೆಯಲ್ಲಿ ಮಹಾರಾಷ್ಟ್ರದ ರತ್ನಾಗಿರಿ, ಸಿಂಧುದುರ್ಗಾ ಮತ್ತು ಗೋವಾ ನದಿ ತೀರದಲ್ಲಿ ಶೋಧಕಾರ್ಯಕ್ಕೆ ತೆರಳಿದೆ. ಮಹಾರಾಷ್ಟ್ರ ಮತ್ತು ಗೋವಾದ ಸ್ಥಳೀಯ ಮೀನುಗಾರರ ನೆರವನ್ನು ಪಡೆದು ಉಡುಪಿ ಪೊಲೀಸ ಶೋಧಕಾರ್ಯ ನಡೆಸಲಿದ್ದಾರೆ.
ಈ ಮೊದಲು ಈ ಭಾಗದಲ್ಲಿ ದೊಡ್ಡ ಬೋಟಿನ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಕೆಲವು ಭಾಗಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ 10 ಅಶ್ವಶಕ್ತಿಯ ಎಂಜಿನ್ ಬಳಸಿ ಸಣ್ಣ ದೋಣಿಯಲ್ಲಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.ಕೇರಳ ಕಡಲತೀರ ಮತ್ತು ಬಂದರು ಪ್ರದೇಶಗಳಲ್ಲಿ ಪರಿಶೀಲಿಸುವ ಸಲುವಾಗಿ ಪೊಲೀಸರು ಈಗಾಗಲೇ ತೆರಳಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಲಾಗಿದೆ.
ಮಲ್ಪೆಯಲ್ಲಿ 15 ದಿನಗಳಿಂದ ಆಳ ಸಮುದ್ರ ಬೋಟ್ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಮೀನುಗಾರಿಕೆ ಉದ್ಯಮಕ್ಕೆ ಸಂಬಂಧಿಸಿದಂತೆ ಮೀನುಮಾರಾಟ, ಮಂಜುಗಡ್ಡೆ ಸ್ಥಾವರ, ಫಿಶ್‌ಮೀಲ್ ಘಟಕಗಳು ವ್ಯವಹಾರಗಳು ಕೂಡ ಸ್ಥಗಿತವಾಗಿವೆ.











Click it and Unblock the Notifications