ಶಕ್ತಿ ಯೋಜನೆ: ಉಡುಪಿ ಜಿಲ್ಲೆಯಲ್ಲಿ 9.71 ಲಕ್ಷ ಜನರ ಪ್ರಯಾಣ
ಉಡುಪಿ, ಜುಲೈ 18; ಖಾಸಗಿ ಬಸ್‌ಗಳೇ ಅಧಿಕವಾಗಿರುವ ಕರ್ನಾಟಕದ ಕರಾವಳಿ ಭಾಗದ ಜಿಲ್ಲೆ ಉಡುಪಿಯಲ್ಲಿ 'ಶಕ್ತಿ' ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಾರಿಗೆ ಸಂಸ್ಥೆಗೆ ಜುಲೈ 14ರ ತನಕ 3.62 ಕೋಟಿ ರೂಪಾಯಿ ಆದಾಯ ಬಂದಿದೆ.
ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ನಡೆಸುವ 'ಶಕ್ತಿ' ಯೋಜನೆಗೆ ಉಡುಪಿ ಜಿಲ್ಲಾ ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೂನ್ 11ರಂದು ಚಾಲನೆ ನೀಡಿದ್ದರು. ಯೋಜನೆ ಜಾರಿಯಾದ ಬಳಿಕ ಸುಮಾರು 25 ರಿಂದ 30ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ.

ಜಿಲ್ಲೆಯ ಸರ್ಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. 'ಶಕ್ತಿ' ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ವರ್ಗದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದೆ.
ಯಾವ ಬಸ್‌ನಲ್ಲಿ ಎಷ್ಟು ಜನರ ಸಂಚಾರ?: ಜೂನ್ 11 ರಂದು 'ಶಕ್ತಿ' ಯೋಜನೆಗೆ ಚಾಲನೆ ಸಿಕ್ಕಿದ ಬಳಿಕ ಜೂನ್30ರ ತನಕ ಉಡುಪಿ ಘಟಕದಲ್ಲಿ ನಗರ ಸಾರಿಗೆಯಲ್ಲಿ 100838 ಮಹಿಳಾ ಪ್ರಯಾಣಿಕರು, ವೇಗದೂತ ಬಸ್‌ಗಳಲ್ಲಿ 94998 ಮಹಿಳಾ ಪ್ರಯಾಣಿಕರು, ಸಾಮಾನ್ಯ ಬಸ್‌ಗಳಲ್ಲಿ 40232 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದಾಗಿ ಒಟ್ಟು 7,94,933 ರೂ. ಆದಾಯ ಬಂದಿದೆ.
ಕುಂದಪುರ ಘಟಕದಲ್ಲಿ ವೇಗದೂತ ಬಸ್‌ಗಳಲ್ಲಿ 71410 ಮಹಿಳಾ ಪ್ರಯಾಣಿಕರು, ಸಾಮಾನ್ಯ ಬಸ್‌ನಲ್ಲಿ 241497 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ. ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ.
ಜುಲೈ 14ರ ತನಕ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ. ಆದಾಯ, ಕುಂದಾಪುರ ಘಟಕದಲ್ಲಿ 2,29,557 ಮಹಿಳೆಯರು ಸಂಚರಿಸಿದ್ದು, 80,88,362 ರೂ. ಆದಾಯ ಬಂದಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ. ಆದಾಯ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್ ಪ್ರಾಬಲ್ಯ; ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯವಿದೆ. ಆದರೆ 'ಶಕ್ತಿ' ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದಲ್ಲಿ 68 ಬಸ್‌ಗಳು ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಿಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ.
ವಾರಾಂತ್ಯದಲ್ಲಿ ಉಡುಪಿಯ ಶ್ರೀ ಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮದ ಚಟುವಟಿಕೆಗಳಿಗೂ ಸಹ ಆದಾಯ ಬರುತ್ತಿದೆ.
'ಶಕ್ತಿ' ಯೋಜನೆ ಬಗ್ಗೆ ಮಂಗಳೂರು ವಿಭಾಗದ ಸಹಾಯಕ ಸಂಚಾರ ನಿಯಂತ್ರಣಾಧಿಕಾರಿಗಳು ಮಾತನಾಡಿ, "ಸರ್ಕಾರದ 'ಶಕ್ತಿ' ಯೋಜನೆಗೆ ಜಿಲ್ಲೆಯ ಮಹಿಳಾ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕುಂದಾಪುರ ತಾಲೂಕು ಮತ್ತು ಇತರೆ ತಾಲೂಕುಗಳಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಂದ ಬೇಡಿಕೆ ಬರುತ್ತಿದೆ. ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಬಸ್ ಮತ್ತು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಹಾಗೂ ಹೊಸ ಮಾರ್ಗಗಗಳಲ್ಲಿ ಸಂಚರಿಸಲು ಅಗತ್ಯವಿರುವ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಕೇಂದ್ರ ಕಚೇರಿಯನ್ನು ಕೋರಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications