ಕರಾವಳಿಯ ಆಗಸದಲ್ಲಿ ಕಂಡ ಚಲಿಸುವ ನಕ್ಷತ್ರಗಳು-ಸ್ಪಷ್ಟನೆ ನೀಡಿದ ಖಗೋಳಶಾಸ್ತ್ರಜ್ಞರು
ಉಡುಪಿ, ಅಕ್ಟೋಬರ್ 30: ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ಆಕಾಶಭಾಗದಲ್ಲಿ ಮತ್ತೆ ಚಲಿಸುವ ನಕ್ಷತ್ರಗಳು ಕಂಡುಬಂದಿದೆ. ಆಕಾಶದಲ್ಲಿ ಸಾಲು ನಕ್ಷತ್ರಗಳಂತಹ ಬೆಳಕನ್ನು ಕಂಡು ಜನ ಆಶ್ಚರ್ಯಗೊಳಗಾಗಿದ್ದಲ್ಲದೆ, ಇವುಗಳನ್ನು ಏಲಿಯನ್‌ಗಳು ಭೂಮಿಗೆ ಬಂದಿವೆ ಎಂದು ದಿಗ್ಭ್ರಮೆಗೊಂಡಿದ್ದಾರೆ.
ಉಡುಪಿ ಜಿಲ್ಲೆ ಮತ್ತು ಮಂಗಳೂರಿನ ಹಲವು ಭಾಗಗಳಲ್ಲಿ ಈ ಚಲಿಸುವ ನಕ್ಷತ್ರಗಳು ಕಾಣಿಸಿಕೊಂಡಿದೆ. ವಾಸ್ತವದಲ್ಲಿ ಇವು ನಕ್ಷತ್ರಗಳಲ್ಲ, ಏಲಿಯನ್ ಗಳೂ ಅಲ್ಲ. ಹೆಚ್ಚಿನ ಇಂಟರ್ ನೆಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಹರಿಯ ಬಿಟ್ಟ ಸ್ಯಾಟಿಲೈಟ್‌ಗಳು ಎಂದು ಖಗೋಳ ಶಾಸ್ತ್ರಜ್ಞರು ವಾಸ್ತವಾಂಶವನ್ನು ಬಿಚ್ಚಿಡುವ ಮೂಲಕ ಜನತ ಆತಂಕ ವ್ಯಕ್ತಪಡಿಸಿದ್ದಾರೆ.
ಕಾರಿನ ಮೇಲೆ ಪಟಾಕಿ ಸಿಡಿಸಿದ ಯುವಕನಿಗೆ ಚಳಿ ಬಿಡಿಸಿದ ಉಡುಪಿ ಪೊಲೀಸ್
ಆಕಾಶದಲ್ಲಿ ಬೆಳಕಿನ ಸಾಲಿನ ಕೌತುಕದ ಬಗ್ಗೆ ಮಾಹಿತಿ ನೀಡಿದ ಉಡುಪಿಯ ಖಗೋಳ ಶಾಸ್ತ್ರಜ್ಞ ಅತುಲ್ ಭಟ್, ಮಂಗಳೂರು ಉಡುಪಿ ಭಾಗದಲ್ಲಿ 30 ರಿಂದ 50 ಸರಳ ರೇಖೆಯ ಚುಕ್ಕಿಗಳು ಕಂಡಿವೆ. ಈ ಬೆಳಕಿನ ಚುಕ್ಕಿಗಳು ಒಂದೇ ಸರಳ ರೇಖೆಯಲ್ಲಿ ಸಂಚರಿಸಿದಂತೆ ಕಂಡು ಬಂದಿವೆ. ಜನ ಇದನ್ನು ಏಲಿಯನ್ಸ್ ಎಂದು ಭಾವಿಸಿ ಪ್ರಶ್ನಿಸುತ್ತಿದ್ದಾರೆ. ಇವು ಸ್ಟಾರ್ ಲಿಂಕ್ ಎಂಬ ಕಂಪನಿಯ ಸ್ಯಾಟಲೈಟ್‌ಗಳು. ಅಮೆರಿಕದ ವಿಜ್ಞಾನಿ ಎಲಾನ್ ಮಸ್ಕ್ ಇವರ ಕಂಪನಿ ಸ್ಟಾರ್ ಲಿಂಕ್ ಆಗಿದೆ. ಈ ಕಂಪೆನಿಯಿಂದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಿದ್ದಾರೆ. ಹಳ್ಳಿಗಳು ಮತ್ತು ನೆಟ್‌ವರ್ಕ್ ಸಿಗದ ಪ್ರದೇಶಗಳಿಗೆ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಭೂಮಿಯ ಸುತ್ತಲೂ ಹನ್ನೆರಡು ಸಾವಿರ ಸೆಟಲೈಟ್‌ಗಳನ್ನು ಕವಚದ ರೂಪದಲ್ಲಿ ಕಳುಹಿಸಲಿದ್ದಾರೆ. ನೆಟ್ ವರ್ಕ್ ತಲುಪದ ಪ್ರದೇಶಗಳಿಗೂ ಇಂಟರ್ನೆಟ್ ವ್ಯವಸ್ಥೆ ಮಾಡಲು ಇವುಗಳನ್ನು ಬಿಡಲಾಗಿದೆ. ಮುಂದಿನ ದಿನಗಳಲ್ಲಿ 44,000 ಸ್ಯಾಟಲೈಟ್‌ಗಳನ್ನು ಬಿಡುವ ಸಾಧ್ಯತೆ ಇದೆ. ಈಗಾಗಲೇ ಮೂರುವರೆ ಸಾವಿರ ಸ್ಯಾಟಲೈಟ್‌ಗಳು ಬಿಡುಗಡೆಯಾಗಿವೆ.
ಈ ಸ್ಯಾಟಲೈಟ್‌ಗಳು ಕಕ್ಷೆಯನ್ನು ಸೇರುವ ಮುಂಚೆ ಒಂದೇ ಸರಳ ರೇಖೆಯಲ್ಲಿ ಆಕಾಶದಲ್ಲಿ ಸಂಚರಿಸುತ್ತವೆ. ಶುಕ್ರವಾರ ಮತ್ತು ಶನಿವಾರ ರಾತ್ರಿ ಕಂಡಿರುವುದು ಸ್ಟಾರ್ ಲಿಂಕ್ ಜಿ 31 ಸೀರೀಸ್‌ನ ಸ್ಯಾಟಲೈಟ್‌ಗಳು ಆಗಿದೆ. ಶುಕ್ರವಾರ 53 ಉಪಗ್ರಹಗಳನ್ನು ಬಿಡುಗಡೆ ಮಾಡಲಾಗಿತ್ತು. ಶನಿವಾರ ಸಂಜೆ ಕೂಡಾ ಕ್ಷಿತಿಜಕ್ಕೆ ತುಂಬಾ ಹತ್ತಿರ ಹಾದು ಹೋದಂತೆ ಕಾಣುತ್ತದೆ. 48 ಗಂಟೆಗಳ ಬಳಿಕ ಈ ಸ್ಯಾಟಲೈಟ್‌ಗಳು ತಮ್ಮ ಕಕ್ಷೆ ಸೇರಲಿವೆ. ಈ ಹಿಂದೆಯೂ ಒಂದು ಬಾರಿ ಸರಳ ರೇಖೆಯಲ್ಲಿ ಸ್ಯಾಟಲೈಟ್‌ಗಳ ಸಂಚಾರ ನೋಡಿದ್ದೇವೆ. ಇದರಿಂದ ಮನುಷ್ಯನಿಗೆ ಯಾವುದೇ ಹಾನಿ ಇಲ್ಲ ಎಂದು ಅತುಲ್ ಭಟ್ ಹೇಳಿದ್ದಾರೆ..
ಆದರೆ ಖಗೋಳ ಶಾಸ್ತ್ರಜ್ಞರು ಈ ಬಗ್ಗೆ ಸ್ವಲ್ಪ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಟೆಲಿಸ್ಕೋಪ್ ಮೂಲಕ ಆಕಾಶದ ಅಧ್ಯಯನ ಮಾಡುವಾಗ, ಈ ರೀತಿ ಸರಳ ರೇಖೆಯಲ್ಲಿ ಬರುವ ಸ್ಯಾಟಲೈಟ್‌ಗಳು ಅಧ್ಯಯನಕ್ಕೆ ಅಡ್ಡಿಪಡಿಸುತ್ತವೆ. ಖಗೋಳಶಾಸ್ತ್ರಜ್ಞರು ಇದನ್ನು ವಿರೋಧಿಸಿದ್ದಾರೆ. ಭೂಮಿಯ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯ ಸಿಗುತ್ತಿಲ್ಲ. ಇಂಟರ್ನೆಟ್ ಸೌಲಭ್ಯ ಈಗ ಮೂಲಭೂತ ಅಗತ್ಯವಾಗಿ ಮಾರ್ಪಟ್ಟಿದೆ. ಹಾಗಾಗಿ ಈ ರೀತಿಯ ಸ್ಯಾಟಲೈಟ್ ಬಿಡುಗಡೆ ಮಾಡುವುದು ಅನಿವಾರ್ಯ. ಈ ಸ್ಯಾಟಲೈಟ್ ಗಳಿಂದ ಭೂಮಿಯ ಎಲ್ಲಾ ಪ್ರದೇಶಕ್ಕೂ ಇಂಟರ್ನೆಟ್ ಸೌಲಭ್ಯ ಸಿಗುತ್ತೆ. ಇನ್ನು ಮುಂದೆಯೂ ಈ ರೀತಿಯ ಸ್ಯಾಟಲೈಟ್‌ಗಳು ಬರಿಯ ಕಣ್ಣಿಗೆ ಕಾಣಿಸುತ್ತದೆ ಎಂದು ಅತುಲ್ ಭಟ್ ಸ್ಪಷ್ಟನೆ ನೀಡಿದ್ದಾರೆ.