Get Updates
Get notified of breaking news, exclusive insights, and must-see stories!

ಹಿಂದೂಗಳು ನೊಂದಿದ್ದಾರೆ, ಈಗ ನೋವು ಸ್ಫೋಟವಾಗಿದೆ: ಮುಸ್ಲಿಂ ವರ್ತಕರಿಗೆ ಪೇಜಾವರ ಶ್ರೀ ಸಂದೇಶ

ಉಡುಪಿ, ಮಾರ್ಚ್ 30: ಹಿಂದೂ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ವಿಚಾರವಾಗಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಉಡುಪಿ ಮುಸ್ಲಿಂ ವರ್ತಕರು ಭೇಟಿಯಾಗಿದ್ದಾರೆ.

ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯ ಅಬೂಬಕ್ಕರ್ ಆತ್ರಾಡಿ ನೇತೃತ್ವದ ಮುಸಲ್ಮಾನ ವ್ಯಾಪಾರಿಗಳು, ಪೇಜಾವರ ಶ್ರೀ ಬಳಿ ಮಾತುಕತೆ ನಡೆಸಿದರು. ಮುಸಲ್ಮಾನ ವರ್ತಕರ ಜೊತೆ ಕ್ರೈಸ್ತ ಹಾಗೂ ಹಿಂದೂ ಧಾರ್ಮಿಕ ಮುಖಂಡರೂ ಸಾಥ್ ನೀಡಿದ್ದು, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪೇಜಾವರ ಶ್ರೀಗಳಿಗೆ ಮನವಿ ಮಾಡಿದ್ದಾರೆ.

ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಸ್ವಾಮೀಜಿಯವರನ್ನು ಭೇಟಿಯಾಗಿ ಜಾತ್ರೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಬೀದಿ ಬದಿ ಜಾತ್ರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಿದ್ದು, ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಮುಸಲ್ಮಾನ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

Muslim Traders Meet Pejawar Seer to Discuss on Ban of Muslim Traders from Hindu Temple Fairs

ಮುಸ್ಲಿಂ ವ್ಯಾಪಾರಿಗಳ ಭೇಟಿ ಬಳಿಕ ಮಾತನಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, "ಮುಸಲ್ಮಾನರು ಮತ್ತು ಕ್ರೈಸ್ತ ಮುಖಂಡರು ವ್ಯಾಪಾರ ನಡೆಸುವ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಶಾಂತಿ-ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯವಾಗಿ ಬೇಕು. ಒಂದು ಗುಂಪಿನಿಂದ ಸಾಮರಸ್ಯ ಸಾಧ್ಯವಿಲ್ಲ, ಹಿಂದೂ ಸಮಾಜ ಬಹಳ ಕಾಲದಿಂದ ನೋವನ್ನು ಉಂಡಿದೆ. ಹಲವು ಅಹಿತಕರ ಘಟನೆಗಳಿಂದ ಹಿಂದೂ ಸಮಾಜ ಬಹಳ ನೋವಿನಲ್ಲಿದೆ," ಎಂದರು.

"ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ. ನಿರಂತರವಾಗಿ ಅನ್ಯಾಯವಾದಾಗ ಬೇಸರ, ನೋವು ಸ್ಫೋಟವಾಗುತ್ತದೆ. ಹಿಂದೂ ಸಮಾಜ ನೋವು ಉಂಡು ಉಂಡು ಬೇಸರವಾಗಿ ಇಂದು ಸ್ಫೋಟಗೊಂಡಿದೆ. ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು," ಎಂದು ಶ್ರೀಗಳು ತಿಳಿಸಿದರು.

Muslim Traders Meet Pejawar Seer to Discuss on Ban of Muslim Traders from Hindu Temple Fairs

"ಹಿಂದೂ ಸಮಾಜಕ್ಕೆ ನೋವಾಗುವ ಯಾವುದೇ ಘಟನೆಗಳು ನಡೆಯದಿದ್ದರೆ ಸಾಮರಸ್ಯ ಬೆಳೆಯಬಹುದು. ವಿಧವೆಯ ಕೊಟ್ಟಿಗೆಯಲ್ಲಿದ್ದ ಎಲ್ಲಾ ಹಸುಗಳನ್ನು ಕಳ್ಳತನ ಮಾಡಲಾಗಿದೆ. ಆ ಮಹಿಳೆ ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಅನೇಕ ಘಟನೆಗಳು ಸಮಾಜದಲ್ಲಿ ನಡೆದು ನೋವು ಮಡುಗಟ್ಟಿದೆ. ನಾವು ಕೂಡ ಇಂತಹ ಹಲವಾರು ನೋವನ್ನು ಅನುಭವಿಸಿದ್ದೇನೆ," ಎಂದು ಹೇಳಿದರು.

ನಾವು ಶಾಂತಿ- ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನೆಲೆಸಲು ಯಾರ ಮಧ್ಯಸ್ಥಿಕೆಯ ಬೇಡ. ಯಾರಿಂದ ಅನ್ಯಾಯವಾಗಿದೆ ಅವರು ಸಮಸ್ಯೆ ಸರಿ ಮಾಡಿಕೊಳ್ಳಬೇಕು. ತಪ್ಪು ಮಾಡಿದವರನ್ನು ಆ ಸಮಾಜ ಶಿಕ್ಷಿಸಲಿ. ಮಾಡಿದ ತಪ್ಪನ್ನು ಆ ಸಮಾಜ ಪ್ರತಿಭಟಿಸಲಿ. ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ. ತಪ್ಪಿತಸ್ಥರಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Muslim Traders Meet Pejawar Seer to Discuss on Ban of Muslim Traders from Hindu Temple Fairs

ಶ್ರೀಗಳ ಭೇಟಿ ಬಳಿಕ ಮಾತನಾಡಿದ ಬೀದಿ ಬದಿ ವ್ಯಾಪಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರಿಫ್, "ಸ್ವಾಮೀಜಿಗಳಿಗೆ ಮನವಿ ನೀಡಿದ್ದೇವೆ. ಜಿಲ್ಲೆಯಲ್ಲಿ ಸೌಹಾರ್ದತೆಗೆ ಅಡೆತಡೆಯಾಗಿದೆ. ಸಣ್ಣತನದಿಂದ ನಮ್ಮ ಧರ್ಮದಲ್ಲೇ ಹೊಂದಾಣಿಕೆಯಿಲ್ಲದಂತ ಸಂದೇಶ ಹೋಗುತ್ತಿದೆ. ಅದನ್ನು ತಡೆಯುವ ಕೆಲಸ‌ ಆಗಬೇಕಿದೆ. ಮುಂದಿನ ದಿನಗಳಲ್ಲಿ ಧಾರ್ಮಿಕ ಮುಖಂಡರು, ಧರ್ಮಗುರುಗಳ ಮೂಲಕ ಸರಿಪಡಿಸುತ್ತೇವೆ," ಎಂದರು.

"ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅನ್ನುವುದು ಪೇಜಾವರ ಶ್ರೀಗಳ ಅಭಿಪ್ರಾಯ. ನಮ್ಮ‌ ಧರ್ಮ ಗೌರವಿಸಿ, ಅನ್ಯಧರ್ಮ ಅಗೌರವಿಸದಿರುವುದು ಸರಿಯಲ್ಲ. ನಮ್ಮ ಧರ್ಮ ಪೂಜಿಸಿ, ಅನ್ಯ ಧರ್ಮ ಗೌರವಿಸಿ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಪೇಜಾವರ ಮಠದಲ್ಲಿ ಅನ್ಯ ಧರ್ಮೀಯರನ್ನು ಸ್ವಾಗತಿಸಲಾಗಿದೆ. ಇಲ್ಲಿ ಸೌಹಾರ್ದತೆಗೆ ಉತ್ತಮ ವೇದಿಕೆ ಕಾಣಬಹುದು. ಮುಂದೆ ಸೌಹಾರ್ದತೆಗೆ ಹೋರಾಟ ಮಾಡುತ್ತೇವೆ. ನಮ್ಮ ಮುಸ್ಲಿಂ ಧರ್ಮದಲ್ಲೇ ತಪ್ಪನ್ನು ಸರಿಪಡಿಸಲು ಮೊದಲು ನೋಡುತ್ತೇವೆ," ಎಂದು ಆರೀಫ್ ಹೇಳಿದ್ದಾರೆ.

ಇನ್ನು ಉಡುಪಿ ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಅಬೂಬಕ್ಕರ್ ಅತ್ರಾಡಿ ಮಾತನಾಡಿ, "ಸಮಾಜದಲ್ಲಿ ಶಾಂತಿ- ಸಹಬಾಳ್ವೆ ನೆಲೆಸಲು ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇವೆ. ಮುಸಲ್ಮಾನ ಸಮುದಾಯ ಕೂಡಾ ಶಾಂತಿಯನ್ನು ಬಯಸುತ್ತದೆ. ಒಬ್ಬರು-ಇಬ್ಬರು ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವುದು ಸೂಕ್ತವಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳ ಹಾಗೆ ಸಹಬಾಳ್ವೆಯಿಂದ ಬಾಳಬೇಕು. ಹಿಂದೆ ಆದ ಘಟನೆಗಳನ್ನು ಮರೆತು ಸಹಬಾಳ್ವೆಯಿಂದ ಬಾಳೋಣ. ನಾವೆಲ್ಲರೂ ಸಹಬಾಳ್ವೆಯಿಂದ ಬದುಕೋಣ ಎಂದು ಕಳಕಳಿಯಿಂದ ವಿನಂತಿ ಮಾಡುತ್ತೇನೆ," ಎಂದು ತಿಳಿಸಿದರು.

ಒಂದು ಸಮಿತಿ ರಚನೆ ಮಾಡುವಂತೆ ಸೂಚನೆಯನ್ನು ಸ್ವಾಮೀಜಿ ನೀಡಿದ್ದು, ಪರಿಹಾರ ರೂಪಿಸುವ ಭರವಸೆಯನ್ನು ಸ್ವಾಮೀಜಿ ಕೊಟ್ಟಿದ್ದಾರೆ. ಮುಸಲ್ಮಾನ ಸಮುದಾಯದ ಒಳಗೆ ನಾವು ಯಾವುದೇ ಮೀಟಿಂಗ್ ಮಾಡಿಲ್ಲ. ಚರ್ಚೆ ಹಲವು ದಾರಿಗಳಲ್ಲಿ ಸಾಗಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮನಸ್ಸಿಗೆ ಬಂದ ಹಾಗೆ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಶಾಂತಿ ಕದಡುತ್ತದೆ. ಮಾತಿನಲ್ಲಿ ಪ್ರೀತಿ ತೋರಿದರೆ ಸಮಾಜದ ಶಾಂತಿ ಕದಡುವುದಿಲ್ಲ. ಒಂದು ಕೈಯಿಂದ ಸಾಮರಸ್ಯದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಅಬೂಬಕ್ಕರ್ ಆತ್ರಾಡಿ ಹೇಳಿದ್ದಾರೆ.

ಉಡುಪಿ ಮುಸಲ್ಮಾನ ವರ್ತಕರ ಜೊತೆ ಕ್ರೈಸ್ತ ಧರ್ಮಗುರು ಫಾ. ಚಾರ್ಲ್ಸ್ ಕೂಡಾ ಪೇಜಾವರ ಶ್ರೀಯವರನ್ನು ಭೇಟಿಯಾಗಿದ್ದಾರೆ. ಆ ಬಳಿಕ ಮಾತನಾಡಿದ ಫಾ. ಚಾರ್ಲ್ಸ್, ನಾವೆಲ್ಲರೂ ಮನುಷ್ಯತ್ವದ ತತ್ವದಲ್ಲಿ ಬಾಳುವವರು. ಹೊಂದಾಣಿಕೆಯಿಂದ ನಡೆದುಕೊಂಡು ಹೋದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿ ಕೆಲವರು ಅಲ್ಲಲ್ಲಿ ತಪ್ಪುಗಳನ್ನು ಮಾಡುತ್ತಾರೆ.

ಒಬ್ಬಿಬ್ಬರು ಮಾಡಿದ ತಪ್ಪಿನಿಂದ ಹಲವರಿಗೆ ಸಮಸ್ಯೆಗಳು ಆಗುತ್ತದೆ. ತಪ್ಪು- ಒಪ್ಪುಗಳನ್ನು ಸರಿ ಮಾಡಿ ಮುಂದೆ ಹೋದರೆ ಶಾಂತಿ ಸಹಬಾಳ್ವೆ ಸಾಧ್ಯ. ಧರ್ಮ ಎಲ್ಲರಿಗೂ ಬೇಕು. ಧರ್ಮಕ್ಕಾಗಿ ಮನುಷ್ಯತ್ವವನ್ನು ಬೇರ್ಪಡಿಸುವುದು ಸರಿಯಲ್ಲ. ಮನುಷ್ಯತ್ವ ಮತ್ತು ದೈವತ್ವ ಜೊತೆ ಜೊತೆಯಾಗಿ ಹೋದರೆ ಮಾತ್ರ ಜೀವಿಸಲು ಸಾಧ್ಯ. ಮನುಷ್ಯತ್ವವನ್ನು ಎತ್ತಿಟ್ಟುಕೊಂಡು ದೈವತ್ವವನ್ನು ಬಳಸಿಕೊಂಡು ಜೊತೆ ನಡೆದರೆ ಸಹಬಾಳ್ವೆ ಎಂದು ಉಡುಪಿಯ ಶೋಕಮಾತಾ ಇಗರ್ಜಿಯ ಧರ್ಮಗುರು ಫಾ. ಚಾರ್ಲ್ಸ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+