ಉಡುಪಿ: ಸಂಸದರ ಆದರ್ಶ ಗ್ರಾಮ ಕೆರಾಡಿಯಲ್ಲಿ ಸ್ಮಶಾನ ಮೌನ; ಅಭಿವೃದ್ಧಿ ಕಾಣದೇ ಊರು ಬಿಟ್ಟ ಜನರು

ಉಡುಪಿ, ಸೆಪ್ಟೆಂಬರ್ 30: ಅದ್ಭುತ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಈ ಊರಿನ ಹೆಸರು ಕೆರಾಡಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕೇಂದ್ರದಿಂದ ಬಹುದೂರವಿರುವ ಊರು. 2014ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗ (ಉಡುಪಿ ಜಿಲ್ಲೆಯ ಕೆಲ ಗ್ರಾಮಗಳು ಕ್ಷೇತ್ರಕ್ಕೆ ಸೇರಿವೆ) ಸಂಸದರಾಗಿದ್ದಾಗ ಆದರ್ಶ ಗ್ರಾಮವಾಗಿ ಕೆರಾಡಿ ಆಯ್ಕೆಯಾಗಿತ್ತು.

ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾದಾಗ ಊರಿವರು ಇನ್ನಾದರೂ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಅಂತ ಕನಸು ಕಂಡಿದ್ದರು. ಆದರೆ ಕಂಡ ಕನಸು ನನಸಾಗಲೇ ಇಲ್ಲ. ಕೆರಾಡಿ ಗ್ರಾಮದ ಈ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಹಲವಾರು ಮನೆಗಳಿದ್ದವು. ಆದರೆ‌ ಈಗ ವಾಸ ಅಂತ ಇರುವುದು ಕೇವಲ ಮೂರೇ ಮೂರು ಮನೆಗಳು. ಉಳಿದ ಮನೆಗಳಿಗೆಲ್ಲಾ ಬಾಗಿಲು ಹಾಕಲಾಗಿದ್ದು, ಜನ ದೂರದ ಪಟ್ಟಣ ಸೇರಿದ್ದಾರೆ.

 ವಿದ್ಯುತ್ ಸಂಪರ್ಕ ಭರವಸೆಯಾಗಿಯೇ ಉಳಿದಿದೆ

ವಿದ್ಯುತ್ ಸಂಪರ್ಕ ಭರವಸೆಯಾಗಿಯೇ ಉಳಿದಿದೆ

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಊರಿಗೆ ಬರಬೇಕಾದರೆ ಹೊಂಡ- ಗುಂಡಿಯ ರಸ್ತೆ ಮೂಲಕವೇ ಬರಬೇಕು. ಊರಿಗೆ ವಿದ್ಯುತ್ ಸಂಪರ್ಕ ಭರವಸೆಯಾಗಿಯೇ ಉಳಿದಿದ್ದು, ಹೀಗಾಗಿ ಇವರು ಮನೆಗಳಿಗೆ ರಾತ್ರಿ ಬೆಳಕಿಗಾಗಿ ಸೋಲಾರ್ ಅಳವಡಿಕೆ ಮಾಡಿದ್ದಾರೆ. ಇನ್ನೂ ನೆಟ್‌ವರ್ಕ್ ಸಂಪರ್ಕ ಈ ಊರಲ್ಲಿ ಇಲ್ಲವೇ ಇಲ್ಲ. ಈ ಎಲ್ಲ ಸಮಸ್ಯೆ ಸಾಕಪ್ಪ ಸಾಕು ಅಂತ ಇದ್ದ ಜನರು, ದೂರದ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದಾರೆ. ಹಲವು ಮನೆಗಳಿದ್ದ ಈ ಪ್ರದೇಶದಲ್ಲಿ ಉಳಿದಿರುವುದು ಮೂರು ಮನೆಗಳು ಮಾತ್ರ.

ಇನ್ನೂ ಕೆರಾಡಿಯ ಈ ಪ್ರದೇಶದಲ್ಲಿ ಉತ್ತಮ ಕೃಷಿ ಭೂಮಿ ಇದ್ದು, ಬೇಸಿಗೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ನೀರು ಹಾಯಿಸುದಕ್ಕೆ ಸಮಸ್ಯೆ ಆಗುತ್ತಿದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವುದು ಕಷ್ಟವೇ. ಇಷ್ಟೇ ಅಲ್ಲದೇ ಇದೇ ಪ್ರದೇಶದಲ್ಲಿ ಪ್ರಸಿದ್ಧ ಶ್ರೀ ಕೇಶವನಾಥೇಶ್ವರ ಉದ್ಭವ ಲಿಂಗ ದೇವಾಲಯ ಇದೆ.

 ಹುಟ್ಟೂರಿನ ದೇವಸ್ಥಾನಕ್ಕೆ ಬರುವ ರಿಷಭ್ ಶೆಟ್ಟಿ

ಹುಟ್ಟೂರಿನ ದೇವಸ್ಥಾನಕ್ಕೆ ಬರುವ ರಿಷಭ್ ಶೆಟ್ಟಿ

ಖ್ಯಾತ ನಟ ರಿಷಭ್ ಶೆಟ್ಟಿ ತಮ್ಮ ಸಿನಿಮಾ ಯಶಸ್ವಿಗಾಗಿ ತಮ್ಮ ಹುಟ್ಟೂರಿನ ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತಾರೆ. ಇತ್ತೀಚೆಗೆ ಗೆಳೆಯ ರಕ್ಷಿತ್ ಶೆಟ್ಟಿಯನ್ನು ಈ ದೇವಾಲಯಕ್ಕೆ ಕರೆದುಕೊಂಡು ಬಂದಿದ್ದರು. ಇಂತಹ ವಿಶೇಷ ಗುಹಾಂತರ ದೇಗುಲಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದು, ಸಾರಿಗೆ ಸಂಪರ್ಕವೇ ಕಷ್ಟವಾಗಿದೆ. ಕಚ್ಚಾ ರಸ್ತೆಯಲ್ಲಿ ಬರುವುದೇ ದೊಡ್ಡ ಸವಾಲಾಗಿದ್ದು, ಪ್ರಾಚೀನ ದೇವಾಲಯದ ಅಭಿವೃದ್ಧಿಗೂ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ.

ಕುಂದಾಪುರದಿಂದ ಕೆರಾಡಿ ಗ್ರಾಮ ಪ್ರವೇಶಿಸುವ ರಸ್ತೆ ಹೊರತುಪಡಿಸಿದರೆ ಬೇರಾವ ರಸ್ತೆಯೂ ಅಭಿವೃದ್ಧಿ ಆಗಿಲ್ಲ. ಕಾರೇಬೈಲು, ಹಯ್ಯಂಗಾರು, ದೀಟಿ, ನಡುಘಟ್ಟ, ಶಾಡಬೇರು, ಹೊಸಗದ್ದೆ, ಚಪ್ರಮಕ್ಕಿ, ಕುಳ್ಳಂಬಳ್ಳಿ ಉಪಗ್ರಾಮಗಳು ಸ್ವಾತಂತ್ರ್ಯದ 75 ವರ್ಷದ ಬಳಿಕವೂ ರಸ್ತೆ ಸೌಕರ್ಯ ಕಂಡುಕೊಂಡಿಲ್ಲ. ಸಂಸದರ ಆದರ್ಶ ಗ್ರಾಮ ಯೋಜನೆ ಘೋಷಣೆಯಾದಾಗ ಈ ಗ್ರಾಮದಲ್ಲಿ 5,354 ಜನಸಂಖ್ಯೆ ಹೊಂದಿತ್ತು. 1,141ಕುಟುಂಬಗಳು ನೆಲೆಸಿದ್ದು, ಅದರಲ್ಲಿ 83 ಎಸ್ಸಿ, 116 ಎಸ್ಟಿ ಕುಟುಂಬಗಳು ಇದರಲ್ಲಿ ಸೇರಿತ್ತು. ಆದರೀಗ ಕೆರಾಡಿ ಗ್ರಾಮದಲ್ಲಿ ಉಳಿದಿರುವುದು ಕೇವಲ ಕೆಲವು ಜನ.

 ಸರಕಾರ ಕಣ್ಣೆತ್ತಿಯೂ ನಮ್ಮತ್ತ ನೋಡುತ್ತಿಲ್ಲ

ಸರಕಾರ ಕಣ್ಣೆತ್ತಿಯೂ ನಮ್ಮತ್ತ ನೋಡುತ್ತಿಲ್ಲ

"ಅರಣ್ಯದ ನಡುವೆ ಕಷ್ಟಕರ ಬದುಕು ನಡೆಸುತ್ತಿರುವ ನಮ್ಮತ್ತ ಸರಕಾರ ಕಣ್ಣೆತ್ತಿಯೂ ನೋಡುತ್ತಿಲ್ಲ. ನಾವು ಈ ನಾಡಿನ ಜನರಲ್ಲವೇ ಎಂಬ ಭಾವ ಕಾಡುತ್ತಿದೆ. ನಮ್ಮೂರಿನ ಪ್ರಸಿದ್ಧ ಗುಹಾಂತರ ದೇವಾಲಯ ಶ್ರೀಕೇಶವನಾಥ ಮಂದಿರಕ್ಕೆ ಹೋಗಲು ಸಹ ಸರಿಯಾದ ರಸ್ತೆ ನಿರ್ಮಾಣ ಆಗಿಲ್ಲ. ಸಾಕಷ್ಟು ಕಡೆಗಣಿಸಲ್ಪಟ್ಟಿದ್ದೇವೆ. 2014ರಲ್ಲಿ ಪ್ರಧಾನಮಂತ್ರಿಯವರ ಕನಸಾಗಿರುವ ಆದರ್ಶ ಗ್ರಾಮ ಯೋಜನೆಗೆ ನಮ್ಮ ಗ್ರಾಮ ಆಯ್ಕೆಯಾದ ಬಗ್ಗೆ ಸಂತೋಷ ಪಟ್ಟಿದ್ದೆವು. ಇನ್ನಾದರೂ ಕನಿಷ್ಠ ನಮ್ಮ ಬೇಡಿಕೆಗಳು ಈಡೇರಲಿದೆ ಎಂಬ ಖುಷಿಯಿತ್ತು. ಆದರೆ ಈವರೆಗೆ ಆದರ್ಶ ಗ್ರಾಮ ಯೋಜನೆಯಡಿ ಯಾವ ಪರಿವರ್ತನೆಯೂ ಆಗಿಲ್ಲ,'' ಎಂದು ಕೆರಾಡಿ ಗ್ರಾಮದ ನಿವಾಸಿ ವಿಶ್ವನಾಥ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

 ತಿರುಗಿ ನೋಡದ ಸಂಸದ ಬಿ.ವೈ. ರಾಘವೇಂದ್ರ

ತಿರುಗಿ ನೋಡದ ಸಂಸದ ಬಿ.ವೈ. ರಾಘವೇಂದ್ರ

ಅಂದಹಾಗೆ ಅರಣ್ಯ ಇಲಾಖೆ ಕೆಲವು ನಿಬಂಧನೆಗಳೊಂದಿಗೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಅಳವಡಿಸಲು ಅವಕಾಶ ನೀಡಿದೆ. ಆದರೆ ಜನ ಪ್ರತಿನಿಧಿಗಳು ಮಾತ್ರ ಮನಸ್ಸು ಮಾಡ್ತಿಲ್ಲ. ಮೂಲಭೂತ ಸೌಕರ್ಯ ಇದ್ದರೆ ಬಿಟ್ಟು ಹೋದ ಮನೆಯವರು ಮತ್ತೆ ಬಂದು ವಾಸ್ತವ್ಯ ಮಾಡುತ್ತಾರೆ ಅಂತಾರೆ ಊರಿನವರು. ಒಟ್ಟಿನಲ್ಲಿ ಒಂದು ಕಾಲದಲ್ಲಿ ನೂರಾರು ಮಕ್ಕಳಿದ್ದ ಈ ಊರಲ್ಲಿ ಇಂದು ಸ್ಮಶಾನ ಮೌನ ಆವರಿಸಿದೆ. ಆದರ್ಶ ಗ್ರಾಮ ಅಂತ ಆಯ್ಕೆಯಾಗಿ ಇನ್ನೂ ಅಭಿವೃದ್ಧಿ ಆಗದೇ ಇರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಬೇಕಿದೆ.

ಕೆರಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಗೆ ಬರುವುದಾದರೂ, ಲೋಕಸಭಾ ಕ್ಷೇತ್ರ ಮಾತ್ರ ಶಿವಮೊಗ್ಗ ವ್ಯಾಪ್ತಿಗೆ ಬರುತ್ತದೆ. 2104ರಿಂದ ಮೂರು ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಸಂಸದರಾಗಿದ್ದರು. ಆ ಬಳಿಕ ಅವರ ಮಗ ಬಿ.ವೈ. ರಾಘವೇಂದ್ರ ಸದ್ಯ ಈ ಕ್ಷೇತ್ರದ ಸಂಸದ. ಆದರೆ, ಅವರೂ ತಮ್ಮ ತಂದೆಯ ಆದರ್ಶ ಗ್ರಾಮ ಹೇಗಿದೆ ಎಂದು ನೋಡುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಅನ್ನುವುದು ಜನರಿಗೆ ಗಗನ ಕುಸುಮವಾಗಿದೆ.

Recommended Video

      Virat Kohli ಪಂದ್ಯ ಗೆದ್ದ ಬಳಿಕ ಹೇಳಿದ್ದೇನು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+