ಸಿದ್ಧರಾಮಯ್ಯ ಭ್ರಷ್ಟಾಚಾರದ ಪಿತಾಮಹ ಎಂದ ಸಚಿವ ಸುನೀಲ್ ಕುಮಾರ್
ಉಡುಪಿ, ಸೆಪ್ಟೆಂಬರ್ 24: ಕಾಂಗ್ರೆಸ್ ನಿಂದ ಪೇಸಿಎಂ ಅಭಿಯಾನ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಜೋರಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಗಳ ಸರಮಾಲೆಯನ್ನೇ ಬಿಡುಗಡೆ ಮಾಡುತ್ತಿದ್ದರೆ, ಬಿಜೆಪಿ ಕೌಂಟರ್ ನೀಡುತ್ತಿದೆ. ಕಾಂಗ್ರೆಸ್ ನ ಪೇಸಿಎಂ ಅಭಿಯಾನದ ಬಗ್ಗೆ ಇಂಧನ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದು, ಸಿದ್ಧರಾಮಯ್ಯ ಭ್ರಷ್ಟಾಚಾರದ ಪಿತಾಮಹ ಎಂದು ಟೀಕಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಪೇಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆ. ಪೋಸ್ಟರ್ ಅಂಟಿಸಿದ ಡಿಕೆಶಿ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಇಡಿ ವಿಚಾರಣೆಗೆ ಒಳಗಾಗಿ ಪೇಸಿಎಂ ಪೋಸ್ಟರ್ ಅಳವಡಿಸುತ್ತಾರೆ. ಇದು ಹ್ಯಾಸ್ಯಾಸ್ಪದ. ಕಾಂಗ್ರೆಸಿಗೆ ಪೇಸಿಎಂ ಪೋಸ್ಟರ್ ಅಂಟಿಸಲು ನೈತಿಕತೆ ಇದಿಯಾ ಎಂದು ಟೀಕಿಸಿದರು.
ಅಧಿಕಾರ ಪಡೆಯಲು ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಶುರುಮಾಡಿಕೊಂಡಿದೆ: ಸಿಎಂ ಬೊಮ್ಮಾಯಿ
ಅರ್ಕಾವತಿ, ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಹಣ ನುಂಗಿದವರು ಕಾಂಗ್ರೆಸಿಗರು. ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಉತ್ತುಂಗಕ್ಕೆ ಏರಿಸಿದ ಕಾಂಗ್ರೆಸಿಗರು ನಮ್ಮ ಕಾಮನ್ ಸಿಎಂ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಲಯಕ್ಕೆ ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ..10 ದಿನದ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವು ಚರ್ಚೆ ನಡೆದಿಲ್ಲ. ನೀವು ಭ್ರಷ್ಟಾಚಾರದ ಆರೋಪ ಮಾಡುತ್ತಿರಿ. ನಾವು ನಮ್ಮ ಕಾರ್ಯಕ್ರಮ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ಉಡುಪಿಯಲ್ಲಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ದೇಶಾದ್ಯಂತ ಎನ್ಐಎ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್, ಪಿಎಫ್ಐಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಗ್ಗು ಬಡಿಯುತ್ತದೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ಯಾರು ಮಾಡಬಾರದು. ಬಂಧಿತ ವ್ಯಕ್ತಿಗಳು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಂಡಿದ್ದಾರೆ. ಜಗತ್ತಿನ ಯಾವುದೇ ರಾಷ್ಟ್ರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಭಾರತ ಹಿಂದೂ ರಾಷ್ಟ್ರ. ಹಿಂದೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆಧಾರದಲ್ಲೇ ರಾಷ್ಟ್ರವನ್ನು ಮತ್ತಷ್ಟು ಸಬಲಗೊಳಿಸುತ್ತೇವೆ. ಜನರು ಕೂಡ ಇದಕ್ಕೆ ಬೆಂಬಲವನ್ನು ಕೊಡಬೇಕು ಎಂದರು.
ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಾಗಿ ಹೇಳಿದ್ದೆ. ಕಾರ್ಯಕರ್ತರಿಗೆ ನ್ಯಾಯ ಕೊಡುವ ಭರವಸೆಯನ್ನು ನೀಡಿದ್ದೆವು. ಪ್ರಕರಣವನ್ನು ಎನ್ಐಎಗೆ ಕೊಟ್ಟು ಸರ್ಕಾರ ಕೈ ಕಟ್ಟಿ ಕುಳಿತಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಎಸ್‌ಡಿಪಿಐ, ಪಿಎಫ್‌ಐಯನ್ನು ಪೋಷಿಸಿದ್ದರು. ಸಿದ್ದರಾಮಯ್ಯ ಕಾಲದಲ್ಲಿ 18 ಹಿಂದೂಗಳ ಹತ್ಯೆಯಾಗಿತ್ತು. ಆರೋಪಿಗಳ ಕೇಸನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ಅಶಾಂತಿ ಸೃಷ್ಟಿಸಿರುವ ಅವರ ವಿರುದ್ಧ ಕಾಂಗ್ರೆಸ್ ಸ್ನೇಹ ಬೆಳೆಸಿತ್ತು. ಆದರೆ ಭಾರತದ ಭದ್ರತೆಯನ್ನು ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವಾಗಿದೆ ಎಂದು ಹೇಳಿದರು.
ನಾಡಗೀತೆ ಸಮಯ ನಿಗದಿ ವಿಚಾರವಾಗಿ ಮಾತನಾಡಿ, ಕಳೆದ 18 ವರ್ಷಗಳಿಂದ ನಾಡಗೀತೆಯ ಬಗ್ಗೆ ಸ್ಪಷ್ಟನೆ ಇರಲಿಲ್ಲ. ರಾಗ ಸಂಯೋಜನೆ ಮತ್ತು ಸಮಯ ನಿಗದಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಬಿಜೆಪಿ ನೇತೃತ್ವದ ಬೊಮ್ಮಾಯಿ ಸರಕಾರ ಸ್ಪಷ್ಟ ನಿಲುವಿಗೆ ಬಂದಿದೆ. ಎಸ್. ಆರ್ ಲೀಲಾವತಿ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ. ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2.30 ಸೆಕೆಂಡ್ ನಲ್ಲಿ ನಾಡಗೀತೆ ಅಂತಿಮವಾಗಿದೆ ಎಂದರು.
ಕುವೆಂಪು ಬರೆದ ನಾಡಗೀತೆಯಲ್ಲಿ ಯಾವುದೇ ಶಬ್ದವನ್ನು ಕಡಿತ ಮಾಡಿಲ್ಲ. ಕನ್ನಡ ಸಂಸ್ಕೃತಿ ಇಲಾಖೆ ಒಪ್ಪಿ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ನಾಡಗೀತೆ ಕರ್ನಾಟಕದ ಅಸ್ಮಿತೆಯ ಪ್ರಶ್ನೆ. ಈ ಹಿಂದೆ ಆರೇಳು ನಿಮಿಷಗಳ ವರೆಗೆ ನಾಡಗೀತೆಯನ್ನು ಹಾಡಲಾಗುತ್ತಿತ್ತು. ಸಾಂಸ್ಕೃತಿಕ ಲೋಕದಲ್ಲಿ ಸಾಹಿತ್ಯ ವಲಯದಲ್ಲಿ ಸದಾಭಿಪ್ರಾಯ ಬಂದಿದೆ. ಬರಗೂರು ರಾಮಚಂದ್ರಪ್ಪರಿಂದ ಭೈರಪ್ಪರವರಿಗೆ ಎಲ್ಲ ಸಾಹಿತಿಗಳು ಒಪ್ಪಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸುನೀಲ್ ಕುಮಾರ್ ಹೇಳಿದ್ದಾರೆ.