ಉಡುಪಿ ಜಿಲ್ಲಾಸ್ಪತ್ರೆಯ ಮಾನಸಿಕ ಅಸ್ವಸ್ಥ ಘಟಕಕ್ಕೆ ಬೇಕಿದೆ ಕಾಯಕಲ್ಪ
ಉಡುಪಿ, ಮಾರ್ಚ್ 30 : ಅನುದಾನದ ಕೊರತೆಯಿಂದ ಅದೇಷ್ಟೋ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳೇ ಇರುವುದಿಲ್ಲ. ಆದರೆ, ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾನಸಿಕ ಅಸ್ವಸ್ಥರ ಪ್ರತ್ಯೇಕ ಘಟಕ ಇದ್ದು ಇಲ್ಲದಂತಾಗಿದೆ.
ಸಿಬ್ಬಂದಿ ಕೊರತೆಯ ಕಾರಣ ನೀಡಿ 2009ರಲ್ಲಿಯೇ ಈ ಘಟಕವನ್ನು ಮುಚ್ಚಲಾಗಿದೆ. ಇದರಿಂದ ಪುರುಷರಿಗೆ 8 ಮತ್ತು ಮಹಿಳೆರಿಗಾಗಿ ಇದ್ದ 5 ಬೆಡ್ ಗಳು ಇದೀಗ ಇವೆಲ್ಲಾ ಶಿಥಿಲಾವಸ್ಥೆಗೆ ಬಂದು ನಿಂತಿವೆ.[ಉಡುಪಿ ಜಿಲ್ಲೆಯಲ್ಲಿ ಅಂಗವಿಕಲರ ಕಷ್ಟಗಳನ್ನು ಕೇಳೋರೇ ಇಲ್ಲವಾ?]

ಈವರೆಗೆ ಈ ಘಟಕವನ್ನು ತೆರೆಯಲು ಯಾವೊಬ್ಬ ಅಧಿಕಾರಿಯೂ, ರಾಜಕಾರಣಿಗಳು ಮನಸ್ಸು ಮಾಡಿಲ್ಲದಿದ್ದರಿಂದ ಮಾನಸಿಕ ಅಸ್ವಸ್ಥರು ಅನಿವಾರ್ಯವಾಗಿ ಸಾಮಾನ್ಯ ರೋಗಿಗಳ ವಾರ್ಡಿನಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಇತ್ತೀಚಿಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪರ್ಕಳ ನಿವಾಸಿ 45 ವರ್ಷದ ರಾಜೇಶ್ ರನ್ನು ಜನರಲ್ ವಾರ್ಡಿನಲ್ಲಿ ಕ್ಷಯ (ಟೀಬಿ) ರೋಗಿಗಳ ಕೋಣೆಯಲ್ಲಿ ದಾಖಲು ಮಾಡಲಾಗಿತ್ತು.

ಇದರಿಂದ ಭಯ ಭೀತನಾದ ರಾಜೇಶ್ ತಮಗೂ ಟೀಬಿ ಸೋಂಕು ಹರಡಬಹುದು ಎಂಬ ಭೀತಿಯಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಇದಕ್ಕೆ ತಾಜಾ ಉದಾಹರಣೆ.
ಸರ್ಕಾರಿ ಆಸ್ಪತ್ರೆಯ ಉನ್ನತೀಕರಣದ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಜನಪ್ರತಿನಿಧಿಗಳು ಮಾನಸಿಕ ಘಟಕದ ಅಭಿವೃದ್ದಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆರ್ಟಿಐ ಕಾರ್ಯಕರ್ತ ಮತ್ತು ಮಾನಸಿಕ ತಜ್ಞ ಡಾ ಪಿ ವಿ ಭಂಡಾರಿ ಹೇಳಿದ್ದಾರೆ.
ಒಟ್ಟಿನಲ್ಲಿ ಶೀಘ್ರವೇ ಈ ಆಸ್ಪತ್ರೆಯಲ್ಲಿನ ಮಾನಸಿಕ ಘಟಕಕ್ಕೆ ಕಾಯಕಲ್ಪ ನೀಡಬೇಕಾಗಿದೆ.












Click it and Unblock the Notifications