ಹರಿದ ಬಲೆಯಲ್ಲಿ ಚಿರತೆ ಹಿಡಿದ ಅರಣ್ಯ ಇಲಾಖೆ ಶೂರರು!

By: ಉಡುಪಿ ಪ್ರತಿನಿಧಿ
Subscribe to Oneindia Kannada

ಕುಂದಾಪುರ, ನವೆಂಬರ್ 5: ಹಟ್ಟಿಯಂಗಡಿ ಸಮೀಪದ ಕನ್ಯಾನಕೊಡ್ಲು ಬಡಾಬೆಟ್ಟು ಎಂಬಲ್ಲಿ ಚಿರತೆಯೊಂದು ತಂತಿ ಬೇಲಿ ಉರುಳಿಗೆ ಸಿಲುಕಿದ ಘಟನೆ ಶುಕ್ರವಾರ ನಡೆದಿದೆ. ಸ್ಥಳೀಯರ ಸಹಕಾರದೊಂದಿಗೆ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ಸುರಕ್ಷಿತವಾಗಿ ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾದರು.

ಗದ್ದೆಗೆ ಹೊಂದಿಕೊಂಡಿರುವ ಖಾಸಗಿ ಹಾಡಿಯ ತಂತಿ ಬೇಲಿಯ ಮೂಲಕ ಹೊರ ನುಸುಳಲು ಯತ್ನಿಸಿದ್ದ ಚಿರತೆಯ ಹಿಂಬದಿ ಕಾಲು, ಸೊಂಟ ತಂತಿಯೊಳಗೆ ಸಿಲುಕಿದ ಪರಿಣಾಮ ಹೊರಬರಲಾರದೆ ಆರ್ಭಟಿಸಿತ್ತು. ಬೆಳಗ್ಗೆ 7:30ರ ಸುಮಾರಿಗೆ ಗದ್ದೆ ಕಟಾವಿಗೆ ಬಂದಿದ್ದ ಮಹಿಳೆಯರು ತಂತಿ ಉರುಳಿಗೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಚಿರತೆಯನ್ನು ನೋಡಿ, ಗಾಬರಿಗೊಂಡು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.

Leopard

ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ರಕ್ಷಣೆ ಮಾಡುವ ಕಾರ್ಯತಂತ್ರ ರೂಪಿಸಿದ್ದರು. ಬೆಳಗ್ಗೆ 11.30ಕ್ಕೆ ಅರಣ್ಯಾಧಿಕಾರಿಗಳು ಬರುವವರೆಗೂ ಚಿರತೆ ಚೀರಾಟ ಮುಂದುವರೆಸಿತ್ತು. ಚಿರತೆಯ ಆರ್ಭಟ ಕಂಡು ಸುತ್ತಮುತ್ತಲಿನ ಜನ ಹೆದರಿ ಅಭಯಾರಣ್ಯಕ್ಕೆ ಬಿಡಬೇಕು ಎಂದು ಪಟ್ಟು ಹಿಡಿದರು.

ಹರಿದ ಬಲೆಯಲ್ಲಿ ಕಾರ್ಯಾಚರಣೆ: ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ತಂತಿ ಬೇಲಿಯ ಉರುಳಿನಲ್ಲಿ ಸಿಲುಕಿಕೊಂಡಿದ್ದ ಅದನ್ನು ಸುರಕ್ಷಿತವಾಗಿ ಹೊರತರುವ ಉಪಕರಣ ಅರಣ್ಯ ಇಲಾಖೆಯಲ್ಲಿ ಇರಲಿಲ್ಲ. ಇಲಾಖೆ ಬೋನು ಕೂಡ ತೀರಾ ಹಳೆಯದಾಗಿತ್ತು. ಚಿರತೆಯನ್ನು ಹಿಡಿಯಲು ಉಪಯೋಗಿಸಿದ ಬಲೆಯು ಹರಿದುಹೋಗಿತ್ತು.

Torn net

ಚಿರತೆ ಆರಾಮವಾಗಿ ನುಸುಳುವಂತಹ ಹರಿದ ಬಲೆಯೊಂದಿಗೆ ಕಾರ್ಯಾಚರಣೆ ಮಾಡಲು ಅರಣ್ಯಾಧಿಕಾರಿಗಳು ಸಿದ್ಧವಾದದ್ದನ್ನು ಕಂಡು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಹರಿದು ಹೋಗಿದ್ದ ಬಲೆ ಹೊಲಿದು ಸರಿಪಡಿಸಿ, ಚಿರತೆಯನ್ನು ಬಲೆಯಲ್ಲಿ ಸೆರೆ ಹಿಡಿಯುವಲ್ಲಿ ಇಲಾಖೆ ಯಶಸ್ವಿಯಾಗಿದೆ.

ಸತತ 3 ಗಂಟೆಗಳ ಕಾರ್ಯಾಚರಣೆ ಬಳಿಕ ಬೇಲಿಗೆ ಸಿಲುಕಿದ್ದ ಚಿರತೆಯನ್ನು ಬಿಡಿಸಿ ನೇರವಾಗಿ ಬಲೆಗೆ ನುಗ್ಗುವ ರೀತಿ ವ್ಯವಸ್ಥೆ ಮಾಡಿ, ನಂತರ ಚಿರತೆಯನ್ನು ಬೋನಿಗೆ ತುಂಬಿಸಿ ಅಭಯಾರಣ್ಯಕ್ಕೆ ಸಾಗಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Leopard captured with torn net by forest department in Kanyanakodlu badabettu, near Hattiyangadi, Kundapur taluk.
Please Wait while comments are loading...