Matsyagandha Express: ಬಾರ್ಕೂರು-ಉಡುಪಿ ನಿಲ್ದಾಣಗಳ ಮಧ್ಯೆ ತಪ್ಪಿದ ಭಾರೀ ರೈಲು ದುರಂತ
ಉಡುಪಿ, ಜುಲೈ 24: ಲೋಕೊ ಪೈಲಟ್‌ಗಳ ಸಕಾಲಿಕ ತುರ್ತು ಕ್ರಮದಿಂದ ಇಂದು ಬೆಳಗ್ಗೆ ಮುಂಬಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ದೊಡ್ಡ ದುರಂತದಿಂದ ಪಾರಾದ ಘಟನೆ ಬಾರ್ಕೂರು- ಉಡುಪಿ ನಿಲ್ದಾಣಗಳ ನಡುವೆ ನಡೆದಿದೆ.
ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9:18ಕ್ಕೆ ಮಣಿಪಾಲದ ಪೆರಂಪಳ್ಳಿ ಬಳಿ ದೊಡ್ಡ ಮರವೊಂದು ಭಾರೀ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿರುವುದನ್ನು ರೈಲಿನ ಲೋಕೋಪೈಲಟ್‌ಗಳು ತೀರಾ ಸಮೀಪದಲ್ಲಿ ಗಮನಿಸಿದ್ದರು. ತಕ್ಷಣವೇ ಅವರು ಎಮರ್ಜೆನ್ಸಿ ಬ್ರೇಕ್ ಅನ್ನು ಬಳಸಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.

ಹಳಿಯಲ್ಲಿ ಬಿದ್ದ ಮರ ಪೈಲಟ್‌ಗಳ ಗಮನಕ್ಕೆ ಬರುವುದು ಸ್ವಲ್ಪ ತಡವಾಗಿದ್ದರೂ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಒಎಚ್‌ಇ ತಂಡದವರು ಮರವನ್ನು ಹಳಿಯಿಂದ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಕಾಲಿಕ ಕ್ರಮದಿಂದ ದೊಡ್ಡ ಅನಾಹುತ ತಪ್ಪಿಸಿದ ಜಾಗೃತ ಮಂಡ್ಯ ಮತ್ತು ಭಟ್ಕಳದ ಲೋಕೊ ಪೈಲಟ್ ಮತ್ತು ಸಹಾಯಕ ಪೈಲಟ್‌ಗೆ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ತಲಾ 15,000ರೂ ಬಹುಮಾನವನ್ನು ಘೋಷಿಸಿದ್ದು, ಸುರತ್ಕಲ್ ನಿಲ್ದಾಣದಲ್ಲಿ ಬಹುಮಾನದ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.
ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ
ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.

ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.
ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, 'ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ' ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು.












Click it and Unblock the Notifications