ದೇವಸ್ಥಾನದ ಅರ್ಚಕರ ನೆರವಿಗೆ ಬಂದ ರಾಜ್ಯ ಸರ್ಕಾರ
ಉಡುಪಿ, ಮೇ 9: ಕೊರೊನಾ ಲಾಕ್ ಡೌನ್‌ನಿಂದ ಸಂಕಷ್ಟದಲ್ಲಿದ್ದ ಅರ್ಚಕರ ನೆರವಿಗೆ ಮುಜರಾಯಿ ಇಲಾಖೆ ಬಂದಿದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳ ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರ ಮಾಡಲಾಗಿದೆ.
''ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಸಾವಿರ ಅರ್ಚಕರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದಿನಸಿ ಕಿಟ್ ವಿತರಿಸಲಾಗುವುದು'' ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಅರ್ಚಕರಿಗೆ ಆರ್ಥಿಕ ಸಹಾಯ ಮಾಡಬೇಕು- ದಿನೇಶ್ ಗುಂಡೂರಾವ್ ಒತ್ತಾಯ
''ಅರ್ಚಕರಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಹಣಕಾಸಿನ ವ್ಯವಸ್ಥೆ ಮಾಡಲು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದ 210 ಎ ದರ್ಜೆ ದೇವಸ್ಥಾನಗಳಲ್ಲಿ ಏಳು ಲಕ್ಷ ಜನರಿಗೆ ನಿತ್ಯ ಊಟ ವಿತರಿಸಲಾಗುತ್ತಿದೆ. ಕದ್ರಿ ದೇವಸ್ಥಾನದಲ್ಲಿ 12 ಸಾವಿರ ಊಟದ ವ್ಯವಸ್ಥೆ ನಡೆಯುತ್ತಿದೆ. ಕೊರೋನಾ ನಿಯಂತ್ರಿಸಲು ಎಲ್ಲರೂ ಒಟ್ಟಾಗಿ ಒಂದಾಗಿ ಕೆಲಸ ಮಾಡಬೇಕು. ದೇವಸ್ಥಾನಗಳು ಆಯಾ ವ್ಯಾಪ್ತಿಯ ಬಡ ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು'' ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೊರೊನಾ ಲಾಕ್ ಡೌನ್‌ನಿಂದ ದೇವಸ್ಥಾನದ ನಿತ್ಯ ಪೂಜೆ ಸ್ಥಗಿತಗೊಂಡಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.