ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ಎರಡು ದಶಕದ ಕನಸು ನನಸು
ಉಡುಪಿ, ಅಕ್ಟೋಬರ್ 23: ಹಲವು ಹೋರಾಟ, ಪ್ರತಿಭಟನೆ, ಚಳುವಳಿಗಳ ಬಳಿಕ ಉಡುಪಿ ಜಿಲ್ಲಾ ಕೇಂದ್ರದಲ್ಲಿದ್ದ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಕೃಷ್ಣನಗರಿಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಉಡುಪಿ ಜಿಲ್ಲೆ ರಚನೆಯಾಗಿ ಸುಮಾರು 23 ವರ್ಷಗಳಾಗಿವೆ. ಆದರೂ ಜಿಲ್ಲಾ ಕೇಂದ್ರದ ಆಸ್ಪತ್ರೆಯನ್ನು ಸುಸಜ್ಜಿತವಾದ ರೀತಿಯಲ್ಲಿ ಇರಿಸದೆ, ಬಡ ಜನರಿಗೆ ಅಗತ್ಯವಾಗಿ ಬೇಕಾದ ಅತ್ಯಾಧುನಿಕ ಸೌಲಭ್ಯಗಳ ಕೊರತೆಯಿಂದ ಆಸ್ಪತ್ರೆ ನರಳುತ್ತಿತ್ತು. ಈ ಸಂಬಂಧ ಹಲವು ಹೋರಾಟಗಳ ಬಳಿಕ ಸಚಿವ ಸಂಪುಟ ಸಭೆ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಿದೆ.
ಮಲ್ಪೆ ಮೀನುಗಾರರಿಗೆ ತಮಿಳುನಾಡು ಮೀನುಗಾರರಿಂದ ಗೂಂಡಾಗಿರಿ
ಉಡುಪಿ ಜಿಲ್ಲಾ ಕೇಂದ್ರದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಬೇಡಿಕೆ ಎರಡು ದಶಕಕ್ಕಿಂತಲೂ ಹಳೆಯದು. ಈ ಸಂಬಂಧ ರಾಜ್ಯ ಹಣಕಾಸು ಇಲಾಖೆ ಈ ಯೋಜನೆಗೆ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟದಲ್ಲೂ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿ, ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿದೆ. 115 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಮತ್ತು 250 ಬೆಡ್, ಆಸ್ಪತ್ರೆಗೆ ಬೇಕಾದಷ್ಟು ಸಿಬ್ಬಂದಿ, ಪೀಠೋಪಕರಣ ಸೇರಿದ ಯೋಜನೆಯಾಗಿದೆ ಎಂದರು.
ಉಡುಪಿ ಜನತೆಯ ಹಲವಾರು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ, ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.