'ಕೃಷ್ಣ ಮಠಕ್ಕೆ ಸಿದ್ದರಾಮಯ್ಯ ಬಾರದಿರಲು ಬುದ್ಧಿಜೀವಿಗಳು ಕಾರಣ'
ಉಡುಪಿ, ನವೆಂಬರ್ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಬಾರದಿರಲು ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರೇ ಕಾರಣ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಠಕ್ಕೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಆಹ್ವಾನ ಕೊಟ್ಟಿದ್ದೇವೆ. ಆಹ್ವಾನ ನೀಡಿದರೂ ಅವರು ಬರುವುದಿಲ್ಲ ಅಂತ ಗೊತ್ತಾದ ಮೇಲೆ ಈ ಬಾರಿ ಆಹ್ವಾನಿಸಿಲ್ಲ. ಆಸಕ್ತಿಯಿಲ್ಲ ಎಂದು ಗೊತ್ತಾದ ಮೇಲೆ ಈ ಬಾರಿ ಆಹ್ವಾನ ನೀಡಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ಕೃಷ್ಣಮಠಕ್ಕೆ ಬರುವ ಆಸಕ್ತಿ ಈ ಹಿಂದೆಯೂ ತೋರಿಸಿಲ್ಲ. ಮುಂದೊಮ್ಮೆ ಬರುವ ಆಶ್ವಾಸನೆಯನ್ನೂ ನೀಡಿಲ್ಲ, ಬಂದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.

ನಾನು ಹಾಗೂ ಸಿದ್ದರಾಮಯ್ಯ ಹಲವು ಬಾರಿ ಭೇಟಿಯಾಗಿದ್ದೇವೆ ಎಂದು ಹೇಳಿದ ಅವರು, ಕೃಷ್ಣ ಮಠಕ್ಕೆ ಹೋಗದಂತೆ ಬುದ್ಧಿ ಜೀವಿಗಳು ಅಂತ ಕರೆಸಿಕೊಳ್ಳುವವರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಾರೆ. ಕೆಲವು ಬುದ್ದಿಜೀವಿಗಳಿಗೆ ಕೃಷ್ಣಮಠ ಅಂದ್ರೆ ಆಗಲ್ಲ. ಪೇಜಾವರ ಶ್ರೀ ಅಂದರೆ ಕೆಲ ಬುದ್ಧಿಜೀವಿಗಳಿಗೆ ಆಗಲ್ಲ ಎಂದು ಅವರು ತಿಳಿಸಿದರು.












Click it and Unblock the Notifications