ಉಡುಪಿಗೆ ಈ ಹೆಸರು ಬಂದಿದ್ದೇಗೆ? ಜಿಲ್ಲೆಯ ಬಗ್ಗೆ ನಿಮಗೆ ಗೊತ್ತಿರರದ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ
ಉಡುಪಿ, ಡಿಸೆಂಬರ್ 26: ಶ್ರೀಕೃಷ್ಣನೂರು, ಕರಾವಳಿಯ ಪ್ರಮುಖ ಜಿಲ್ಲೆ ಉಡುಪಿ. 25 ಆಗಸ್ಟ್ 1997ರಂದು ದಕ್ಷಿಣ ಕನ್ನಡದಿಂದ ವಿಭಜಿಸಿ ಉಡುಪಿಯನ್ನು ಹೊಸ ಜಿಲ್ಲೆಯನ್ನು ರೂಪಿಸಲಾಯಿತು. ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನಾಲ್ಕು ತಾಲೂಕುಗಳನ್ನು ಒಳಗೊಂಡಿರುವ ಈ ಜಿಲ್ಲೆ ಜನ ಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾಗಿದೆ.
ಉಡುಪಿಗೆ ಈ ಹೆಸರು ಯಾಕೆ ಬಂತು ಎನ್ನುವುದರ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ. ಉಡುಪಿ ಹೆಸರನ್ನು ತುಳು ಹೆಸರು 'ಒಡಿಪು' ಇಂದ ಪಡೆಯಲಾಗಿದೆ ಎನ್ನಲಾಗಿದೆ. ಉಡುಪಿ ಎಂಬ ಪದವು ಸಂಸ್ಕೃತ ಭಾಷೆಯ 'ಉಡು' ಹಾಗೂ 'ಪ' ಅಂದರೆ ನಕ್ಷತ್ರ ಹಾಗೂ ದೇವರು ಈ ಪದಗಳಿಂದ ಎಂಬ ಪದವು ಹುಟ್ಟಿಕೊಂಡಿತು ಎಂಬುದರ ಬಗ್ಗೆ ಕಥೆಗಳಲ್ಲಿ ತಿಳಿಸಲಾಗಿದೆ.

ಪುರಾಣ ಕಥೆಗಳ ಪ್ರಕಾರ ಒಮ್ಮೆ ಚಂದ್ರನು ರಾಜ ದಕ್ಷನ 27 ಹೆಣ್ಣು ಮಕ್ಕಳನ್ನು ಮದುವೆಯಾದಾಗ ಚಂದ್ರನ ಬೆಳಕು ಒಮ್ಮೆ ರಾಜ ದಕ್ಷನ ಶಾಪದಿಂದ ಕಡಿಮೆಯಾಯಿತು. ಚಂದ್ರನು ತನ್ನ ಮೂಲ ಹೊಳಪನ್ನು ಹಿಂತಿರುಗಿಸಲು ಶಿವನನ್ನು ಪ್ರಾರ್ಥಿಸಿದನು. ಶಿವನು ಈತನ ಭಕ್ತಿಗೆ ಮೆಚ್ಚಿ ಬೆಳಕು ಪುನರ್ ಮರುಕಳಿಸುವಂತೆ ಮಾಡಿದನು.

ಚಂದ್ರ ಹಾಗೂ ಆತನ ಪತ್ನಿಯಂದಿರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ದರಿಂದ ಅಲ್ಲಿ ಲಿಂಗವೊಂದು ಉದ್ಭವವಾಗಿದ್ದು ಅದು ಇವತ್ತಿಗೂ ಕಾಣಲು ಸಿಗುತ್ತದೆ. ಆದ್ದರಿಂದ ದಂತಕಥೆಗಳ ಪ್ರಕಾರ ಉಡುಪಿಯು ನಕ್ಷತ್ರಗಳ ದೇವರು -ಚಂದ್ರನ ನಾಡು ಎಂದೂ ಸಹ ಜನಪ್ರಿಯತೆ ಪಡೆದಿದೆ.
ಈ ಜಿಲ್ಲೆಯ ಪೂರ್ವ ಗಡಿಯುದ್ದಕ್ಕೂ ಎತ್ತರವಾದ ಮತ್ತು ದಟ್ಟವಾದ ಕಾಡಿನಿಂದ ಕೂಡಿದ ಪಶ್ಚಿಮ ಘಟ್ಟದ ಶ್ರೇಣಿಗಳಿವೆ. ಬೈಂದೂರು, ಗಂಗೊಳ್ಳಿ, ಕುಂದಾಪುರ, ಮಲ್ಪೆ, ಪಡುಬಿದ್ರಿ ಮೊದಲಾದ ಸ್ಥಳಗಳಲ್ಲಿ ವಿಶಾಲವಾದ ಸಮುದ್ರಗಳಿದ್ದು, ಮೀನುಗಾರಿಕೆಯಿಂದ ಉಡುಪಿ ಜಿಲ್ಲೆ ಸಾಗರದಾಚೆಗಿನ ದೇಶಗಳಲ್ಲೂ ಹೆಸರುವಾಸಿಗಿದೆ.

ಉಡುಪಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಲ್ಲಿ ಮೀನುಗಾರಿಕೆ ಗಮನಾರ್ಹ ಸ್ಥಾನ ಪಡೆದಿದೆ. ಉಡುಪಿಯಲ್ಲಿ ಇಂದಿಗೂ ಪಾರಂಪರಿಕವಾಗಿ ಮೀನುಗಾರಿಕೆಗೆ ನಡೆಯುತ್ತಿದೆ. ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶೇ.60ರಷ್ಟು ಉದ್ದದ ಕರಾವಳಿ ಉಡುಪಿ ಭಾಗಕ್ಕೆ ಸೇರಿತ್ತು. ಉಡುಪಿ ಬಳಿ ಇರುವ ಮಲ್ಪೆಯಲ್ಲಿ ಮತ್ತು ಕುಂದಾಪುರದ ದಡಗಳಲ್ಲಿ ಮತ್ಸ್ಯೋದ್ಯಮ ಬೃಹತ್ ಉದ್ಯಮವಾಗಿ ಬೆಳೆದಿದೆ.
ಇನ್ನು ಕುಂದಾಪುರ ಮೀನೂಟ ಎಲ್ಲೆಡೆ ಜನಪ್ರಿಯತೆ ಪಡೆದಂತೆ ಉಡುಪಿಯ ಸಸ್ಯಹಾರವೂ ಕೂಡ ದೇಶದಾದ್ಯಂತ ಜನಪ್ರಿಯತೆ ಪಡೆದಿದೆ. ದಕ್ಷಿಣ ಭಾರತ ಯಾವುದೇ ಭಾಗಕ್ಕೆ ಹೋದರು ಸಹ ಮೊದಲಿಗೆ ಉಡುಪಿ ಹೆಸರು ಇರುವ ನೂರಾರು ಹೋಟೆಲ್‌ಗಳನ್ನು ಕಾಣಬಹುದು. ಸಸ್ಯಹಾರಿ ಊಟಕ್ಕೆ ಇದು ಜನಪ್ರಿಯತೆ ಪಡೆದಿದ್ದು, ಉಡುಪಿಯ ಕೃಷ್ಣ ದೇವರಿಗೆ ಅಡುಗೆ ಮಾಡುವ ಶಿವಳ್ಳಿ ಬ್ರಾಹ್ಮಣರು ಈ ಅಡುಗೆ ಶೈಲಿಯನ್ನು ಸೃಷ್ಟಿಸಿದರು ಎಂದು ಹೇಳಲಾಗುತ್ತದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಭತ್ತ, ಅಡಿಕೆ ಹಾಗೂ ತರಕಾರಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮೀನುಗಾರಿಕೆ ಜೊತೆಗೆ ವ್ಯವಸಾಯ, ಕೋಳಿಸಾಕಣೆ ಮತ್ತು ಪಶುಪಾಲನೆ, ರೈಸ್ ಮಿಲ್, ಗೇರು ಬೀಜ ಕಾರ್ಖಾನೆ, ಹಂಚಿನ ಕಾರ್ಖಾನೆ, ಬೀಡಿ ಕಟ್ಟುವುದು ಇಲ್ಲಿನ ಜನರ ಜೀವನಾಧಾರವಾಗಿದೆ. ಇತ್ತೀಚಿಗೆ ಜಿಲ್ಲೆಯ ಪ್ರಮುಖ ನಗರಗಳಲ್ಲಿ ವಿವಿಧ ರೀತಿಯ ಹೋಟೆಲ್‌ಗಳು, ಮಾಲ್‌ಗಳು, ಚಿತ್ರಮಂದಿರಗಳು ಕೂಡ ತೆರೆಯಲಾಗಿದ್ದು, ಜಿಲ್ಲೆಯ ಉದ್ಯೋಗಕ್ಕೂ ಹೆಚ್ಚಿನ ಅವಕಾಶವಿದೆ. ಇನ್ನು ಶಿಕ್ಷಣದಲ್ಲಿ ಯಾವಾಗಲೂ ಮೇಲುಗೈ ಸಾಧಿಸಿರುವ ಉಡುಪಿ ಜಿಲ್ಲೆಯಲ್ಲಿ ಒಟ್ಟು 343 ಪ್ರಾಥಮಿಕ ಶಾಲೆಗಳು 100ಕ್ಕೂ ಹೆಚ್ಚು ಪ್ರೌಢ ಶಾಲೆಗಳು ಮತ್ತು ಕಾಲೇಜುಗಳೂ ಇವೆ.












Click it and Unblock the Notifications