ಹಿಜಾಬ್ ವಿವಾದ; ಉಡುಪಿ ವಿದ್ಯಾರ್ಥಿನಿಯರು ಹೇಳಿದ್ದು ಹಸಿ ಸುಳ್ಳು
ಉಡುಪಿ, ಫೆಬ್ರವರಿ 08; ರಾಜ್ಯದಲ್ಲಿ ಹಿಜಾಬ್‌ನ ಕಿಚ್ಚು ಹಚ್ಚಿದ್ದ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಉಡುಪಿ ಶಾಸಕ ರಘಪತಿ ಭಟ್ ಸ್ಪೋಟಕ ದಾಖಲೆ ಬಹಿರಂಗ ಮಾಡಿದ್ದಾರೆ. ಕಾಲೇಜಿನಲ್ಲಿ ಹಲವು ವರ್ಷಗಳಿಂದ ಹಿಜಾಬ್ ಧರಿಸಲು ಅವಕಾಶ ನೀಡಿದ್ದರು ಎಂಬ ಹೇಳಿಕೆ ನೀಡಿದ್ದ ವಿದ್ಯಾರ್ಥಿನಿಯರದ್ದು ಹಸಿ ಸುಳ್ಳು ಎಂದು ಶಾಸಕರು ದಾಖಲೆಗಳ ಮೂಲಕ ಬಹಿರಂಗಪಡಿಸಿದ್ದಾರೆ.
ಸದ್ಯ ವಿವಾದ ಸೃಷ್ಠಿಸಿರುವ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಆಲಿಯಾ ಬಾನು ಎಂಬಾಕೆ 2021-2022 ಸಾಲಿನ ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ಇಂಟ್ಯಾರಾಕ್ಟ್ ಕ್ಲಬ್‌ನ ಸಂಚಾಲಕಿಯಾಗಿದ್ದು, ಆಕೆ ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ಹಿಜಾಬ್ ಧರಿಸಿರಲಿಲ್ಲ. ಆದರೆ ಈಗ ಕಾಲೇಜು ಆರಂಭವಾಗಿದ ದಿನದಿಂದ ಹಿಜಾಬ್ ಧರಿಸುತ್ತಿದ್ದೆವು ಎಂಬುವುದಾಗಿ ಸುಳ್ಳು ಹೇಳಿದ್ದು, ಇದಕ್ಕೆ ಉತ್ತರವಾಗಿ ಆಕೆ ಪ್ರಮಾಣ ವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ ತೆಗೆದ ಹಿಜಾಬ್ ರಹಿತ ಫೋಟೋವನ್ನು ಶಾಸಕ ರಘಪತಿ ಭಟ್ ಪ್ರದರ್ಶನ ಮಾಡಿದ್ದಾರೆ.
ಹಿಜಾಬ್ ವಿವಾದಕ್ಕೆ ಮೂಲ ಕಾರಣರಾದ ಆರು ಮಂದಿ ವಿದ್ಯಾರ್ಥಿನಿಯರು, ಈ ಹಿಂದೆ ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ ಎಂಬುವುದನ್ನು ಶಾಸಕ ರಘಪತಿ ಭಟ್ ನಿರೂಪಿಸಿದ್ದಾರೆ. ಈ ದಾಖಲೆಗಳನ್ನು ಹೈಕೋರ್ಟ್‌ಗೂ ಸಲ್ಲಿಕೆ ಮಾಡಿದ್ದು, ಕಾಲೇಜಿನಲ್ಲಿ ಈ ಹಿಂದೆಯಿಂದ ಕಾಲೇಜಿನಲ್ಲಿ ಹಿಜಾಬ್ ಧರಿಸೋಕೆ ಅವಕಾಶ ಇರಲಿಲ್ಲ ಅಂತಾ ಶಾಸಕ ರಘಪತಿ ಭಟ್ ಹೇಳಿದ್ದಾರೆ.

2002ರಿಂದ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳ ದಾಖಲಾತಿಗಳು ಇದೆ. ಕಾಲೇಜಿನ 2009-10 ಸಾಲಿನ ವಾರ್ಷಿಕ ಸಂಚಿಕೆಯಲ್ಲೂ ತರಗತಿ ಪ್ರಕಾರ ವಿದ್ಯಾರ್ಥಿನಿಯರ ಫೋಟೋಗಳಿದ್ದು, ಯಾವುದೇ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಹಿಂದೆಯೂ ಅವಕಾಶ ಇರಲಿಲ್ಲ. ಸಮಾನ ವಸ್ತ್ರಸಂಹಿತೆಯಲ್ಲಿ ವಿದ್ಯಾರ್ಥಿನಿಯರಿದ್ದರು. ಕಾಲೇಜಿನ ಬೆಳಗ್ಗಿನ ಅಸೆಂಬ್ಲಿ ವೇಳೆಯಲ್ಲೂ ವಿದ್ಯಾರ್ಥಿನಿ ಯರು ಹಿಜಾಬ್ ಧರಿಸಿಲ್ಲ. ಈ ಬಗ್ಗೆಯೂ ಬೇಕಾದ ಎಲ್ಲಾ ದಾಖಲೆಗಳಿವೆ ಅಂತಾ ಶಾಸಕ ರಘಪತಿ ಭಟ್ ಹೇಳಿದ್ದಾರೆ.
ಹೈಕೋರ್ಟ್‌ನಲ್ಲಿ ಹಿಜಾಬ್ ರಿಟ್ ಅರ್ಜಿ ಸಲ್ಲಿಕೆಯ ಬೆನ್ನಲ್ಲೇ ವಿದ್ಯಾರ್ಥಿನಿಯರ ವಿರುದ್ದ ಸರ್ಕಾರ ತನಿಖೆಗೆ ಇಳಿದಿದೆ. ವಿದ್ಯಾರ್ಥಿನಿಯರು ಮತ್ತು ಅವರ ಹೆತ್ತವರ ಬಗ್ಗೆ ಪೊಲೀಸ್ ತನಿಖೆ ಮಾಡಲು ಶಾಸಕ ರಘಪತಿ ಭಟ್ ಗೃಹ ಸಚಿವ ಅರಗ ಜ್ಞಾನೇಂದ್ರರ ಬಳಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ರಘಪತಿ ಭಟ್, "ವಿದ್ಯಾರ್ಥಿನಿಯರು ಯಾರ ಸಂಪರ್ಕದಲ್ಲಿದ್ದಾರೆ? ಎಂಬುವುದರ ಬಗ್ಗೆ ತನಿಖೆಯಾಗುತ್ತದೆ. ವಿದ್ಯಾರ್ಥಿನಿಯರು ಪಾಲ್ಗೊಳುತ್ತಿರುವ ಗುಪ್ತ ಸಭೆಗಳ ಕುರಿತು ತನಿಖೆ ಮಾಡುತ್ತೇವೆ. ಅವರಿಗೆ ಎಲ್ಲಿ ತರಬೇತಿ ನೀಡಲಾಗುತ್ತಿದೆ? ಎಂಬುವುದರ ಬಗ್ಗೆ ತನಿಖೆಯಾಗುತ್ತಿದೆ" ಎಂದರು.
"ಅವರ ಹೆತ್ತವರು ಮತ್ತು ವಿದ್ಯಾರ್ಥಿನಿಯರ ಮೊಬೈಲ್ ಸಂಪರ್ಕದ ವಿವರ ತೆಗೆದು ಪೊಲೀಸರಿಂದ ತನಿಖೆ ಮಾಡುತ್ತೇವೆ. ಈ ಬಗ್ಗೆ ಗೃಹ ಸಚಿವರಿಗೆ ಮನವಿ ಮಾಡಿದ್ದು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಪ್ರಕರಣದಲ್ಲಿ ವಿದೇಶಿ ಕೈವಾಡ ಇರುವ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಭಯೋತ್ಪಾದಕ ಸಂಘಟನೆಗಳ ನಂಟಿನ ಬಗ್ಗೆಯೂ ಸಂಶಯ ಇದೆ" ಎಂದು ರಘಪತಿ ಭಟ್ ಹೇಳಿದ್ದಾರೆ.












Click it and Unblock the Notifications