ಉಡುಪಿ ಶಾಂತಿ ಸಭೆಗೆ ಸಿಎಫ್ಐ ಗೈರು: ಸಾಮರಸ್ಯಕ್ಕೆ ಒಪ್ಪಿದ ಸರ್ವರು
ಮಂಗಳೂರು, ಫೆಬ್ರವರಿ 13: ಹಿಜಾಬ್ ಗಲಾಟೆ ಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಉಡುಪಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಉಡುಪಿ ಜಿಲ್ಲಾಡಳಿತ ಶಾಂತಿ ಸಭೆ ಮಾಡಿದೆ.ರಾಜ್ಯದಲ್ಲಿ ಸೋಮವಾರ ದಿಂದ ಶಾಲೆಗಳು ಆರಂಭವಾಗುವ ಜೊತೆಗೆ ಬುಧವಾರದಿಂದ ಕಾಲೇಜುಗಳಿಗೂ ಚಾಲನೆ ದೊರಕುವ ಸಾಧ್ಯತೆಗಳಿವೆ.. ಈ ಹಿನ್ನಲೆಯಲ್ಲಿ ಮತ್ತೆ ವಿದ್ಯಾರ್ಥಿಗಳ ನಡುವೆ ಅಶಾಂತಿ ಸೃಷ್ಟಿಯಾಗಬಾರದೆಂದು ಸರ್ಕಾರದ ಸೂಚನೆ ಯ ಪ್ರಕಾರ ಜಿಲ್ಲಾಡಳಿತ ಶಾಂತಿ ಸಭೆ ಮಾಡಿದೆ. ಉಡುಪಿ ತಾಲೂಕು ಕಛೇರಿಯ ಕೋರ್ಟ್ ಹಾಲ್ ನಲ್ಲಿ ಶಾಂತಿ ಸಭೆ ನಡೆದಿದ್ದು,ಎಲ್ಲಾ ಪಕ್ಷ, ಧರ್ಮ ದ ಮುಖಂಡರು ಸಭೆಯಲ್ಲಿ ಹಾಜರಾಗಿದ್ದರೂ ಸಿಎಫ್ಐ ಮಾತ್ರ ಶಾಂತಿ ಸಭೆಯಲ್ಲಿ ಗೈರಾಗಿದೆ.
ಮಹತ್ವದ ಶಾಂತಿ ಸಭೆಯಲ್ಲಿ ಉಡುಪಿ ಶಾಸಕ ರಘಪತಿ ಭಟ್,ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಡಿವೈಎಸ್ಪಿ ಸುಧಾಕರ್,ಕಾಂಗ್ರೆಸ್, ಬಿಜೆಪಿ ಮುಖಂಡರು,ಹಿಂದೂ ಜಾಗರಣ ವೇದಿಕೆ,ಜಿಲ್ಲಾ ಮುಸ್ಲಿಂ ಒಕ್ಕೂಟ,ಎಸ್ ಡಿ ಪಿ ಐ,ಕ್ರೈಸ್ತ ಧರ್ಮಗುರುಗಳು,ಉಡುಪಿ ಕೃಷ್ಣಮಠದ ಪ್ರತಿನಿಧಿಗಳು,ಎಬಿವಿಪಿ ಮುಖಂಡರು ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಉಡುಪಿಯಲ್ಲಿ ಹಿಂದಿನಿಂದಲೂ ಶಾಂತಿ ಸುವ್ಯವಸ್ಥೆ, ಸೌಹಾರ್ದತೆಗೆ ಹೆಸರು ವಾಸಿಯಾಗಿದೆ. ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟವಾದ ಇತಿಹಾಸವಿದೆ. ಆದರೆ ಹಿಜಾಬ್ ಹೆಸರಿನಲ್ಲಿ ಈ ಸೌಹಾರ್ದತೆಗೆ ಕಳಂಕ ತರೋದು ಬೇಡ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗೋಣ ಅಂತಾ ಶಾಂತಿ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.

ಶಾಂತಿ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಡುಪಿ ಶಾಸಕ ರಘಪತಿ ಭಟ್, ಎಲ್ಲ ಸಂಘಟನೆಯ ಮುಖಂಡರನ್ನು ಸೇರಿಸಿ ಸಭೆ ಕರೆಯಲಾಗಿದೆ. ಎಲ್ಲರೂ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ. ಕೋರ್ಟ್ ಆದೇಶ ಬರುವವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮನವಿ ಮಾಡಲಾಗಿದೆ. ಸಮವಸ್ತ್ರ ಇರುವ ಕಾಲೇಜ್‌ನಲ್ಲಿ ಕೋರ್ಟ್ ಆದೇಶ ಅನ್ವಯಿಸುತ್ತದೆ. ಸಮವಸ್ತ್ರ ಜೊತೆಗೆ ಹಿಜಾಬ್, ಕೇಸರಿ ಧರಿಸುವಂತೆ ಇಲ್ಲ ಅಂತ ಹೇಳಿದ್ದೇವೆ. ಹೈಸ್ಕೂಲ್‌ನಲ್ಲಿ ಯಾವುದೇ ಸಮಸ್ಯೆ ಆಗುದಿಲ್ಲ. ಕೋರ್ಟ್ ತೀರ್ಪು ಆದೇಶ ಯಾರು ಮೀರುದಿಲ್ಲ ಅಂತ ಹೇಳಿದ್ದಾರೆ ಅಂತಾ ಶಾಸಕ ರಘಪತಿ ಭಟ್ ಹೇಳಿದ್ದಾರೆ.
ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ವಿಚಾರ
ಶಾಂತಿ ಸಭೆಯ ಬಳಿಕ ಮಾತನಾಡಿದ ಎಸ್ ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಜೀರ್, ಹಿಜಾಬ್ ಹೆಸರಿನಲ್ಲಿ ಆಗಬಾರದ್ದು ಆಗಿ ಹೋಗಿದೆ. ಶಾಂತಿಯನ್ನು ಬಯಸುವ ಜನರು ಉಡುಪಿ ಜಿಲ್ಲೆಯವರಾಗಿದ್ದಾರೆ. ಈ ಪ್ರಕರಣ ಒಳ್ಳೆಯ ರೀತಿಯಲ್ಲಿ ಮುಕ್ತಾಯವಾಗಲಿ ಅನ್ನುವುದು ನಮ್ಮ ಅಭಿಪ್ರಾಯವಾಗಿದೆ. ಉಡುಪಿ ಜಿಲ್ಲೆಯ ವಾತಾವರಣ ಹಾಳಾಗಬಾರದು.ಮಕ್ಕಳನ್ನು ಕಳುಹಿಸುವುದು ಪೋಷಕರ ತೀರ್ಮಾನವಾಗಿದೆ..ಎಲ್ಲಾ ಮಕ್ಕಳು ಶಾಲೆಗೆ ಬರಲಿ ಎನ್ನುವುದು ನಮ್ಮ ಆಶಯವಾಗಿದೆ. ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಸಹಕರಿಸಬೇಕಾಗಿದೆ. ಹಿಜಾಬ್ ಬೇಕು ಅಂತಾ ಮಕ್ಕಳು ಸಾಂವಿಧಾನಿಕ ಹಕ್ಕು ಕೇಳುತ್ತಿದ್ದಾರೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ. ಕೋರ್ಟ್ ತೀರ್ಮಾನ ಒಳ್ಳೆಯದು ಬರುತ್ತದೆ ಎಂಬ ವಿಶ್ವಾಸವಿದೆ. ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ವಿಚಾರ ಅಂತಾ ನಜೀರ್ ಹೇಳಿದ್ದಾರೆ.

Recommended Video
ಇನ್ನು ಶಾಂತಿ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಹಸಿಲ್ದಾರ್ ಪ್ರದೀಪ್ ಹುರ್ಡೇಕರ್,ಉಡುಪಿ ತಾಲೂಕಿನ ಸರ್ವಪಕ್ಷ ಸರ್ವಧರ್ಮ ಸಭೆ ನಡೆಸಿದ್ದೇವೆ. ಮಠ-ಮಾನ್ಯಗಳ ಧರ್ಮಗುರುಗಳು ಭಾಗವಹಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಸೋಮವಾರ ಶಾಲೆ ಆರಂಭವಾಗುತ್ತದೆ. ಗುರುವಾರದಿಂದ ಪಿಯುಸಿ, ಡಿಗ್ರಿ ಕಾಲೇಜು ಆರಂಭವಾಗುತ್ತದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಲು ಒಪ್ಪಿದ್ದಾರೆ. ಉಡುಪಿ ಮಾದರಿ ರೀತಿಯಲ್ಲಿ ಸಮಸ್ಯೆ ನಿರ್ವಹಿಸುತ್ತದೆ. ಸಮವಸ್ತ್ರ ಕಡ್ಡಾಯ ಇರುವ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಧರಿಸಿ ಬರುತ್ತಾರೆ. ಶಾಂತಿ ಸಭೆ ಯಶಸ್ವಿಯಾಗಿದೆ ಅಂತಾ ಪ್ರದೀಪ್ ಹೇಳಿದ್ದಾರೆ..ಇನ್ನು ಶಾಂತಿ ಸಭೆಗೆ ಸಿಎಪ್ ಐ ಗೈರು ವಿಚಾರದ ಬಗ್ಗೆ ಮಾತನಾಡಿದ ತಹಶಿಲ್ದಾರ್ ಪ್ರದೀಪ್, ಸಿಎಫ್ ಐ ನಾಯಕರಿಗೂ ಕರೆ ಮಾಡಿದ್ದೇವೆ..ಆದರೆ ಗೈರು ಹಾಜರಾದ ಕಾರಣ ಗೊತ್ತಿಲ್ಲ ಅಂತಾ ಹೇಳಿದ್ದಾರೆ.
ಇನ್ನು ಸೋಮವಾರದಿಂದ ಶಿಕ್ಷಣ ಸಂಸ್ಥೆಗಳು ಆರಂಭ ಹಿನ್ನಲೆ ಯಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ. ಫೆ. 14 ರಿಂದ ಫೆಬ್ರವರಿ 19 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು,ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆ ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ ಅಂತಾ ಆದೇಶ ಹೊರಡಿಸಲಾಗಿದೆ. ಫೆಬ್ರವರಿ 14 ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 19ರ ಸಂಜೆ 6 ಗಂಟೆಯ ತನಕ ಸೆಕ್ಷನ್ ಜಾರಿಯಲ್ಲಿದ್ದು ಕಾನೂನು ಭಂಗ ತಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications