Rain Alert: ಉಡುಪಿಯಲ್ಲಿ ಮಳೆ ಅಬ್ಬರಕ್ಕೆ ಮನೆ, ರಸ್ತೆಗಳು ಕೆಸರು ಮಯ!
Udupi Rain: ಉಡುಪಿ ಜಿಲ್ಲೆಯಾದ್ಯಾಂತ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಇಂದೂ ಕೂಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮಣಿಪಾಲ, ಕಾರ್ಖಳ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ಬೆಟ್ಟದ ಮೇಲಿನಿಂದ ಹರಿದು ಬಂದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಇದರಿಂದ ಮಣಿಪಾಲ ರಸ್ತೆ ಕೆಸರು ನೀರಿನಿಂದ ಜಲಾವೃತವಾಗಿದೆ. ಹೀಗೆ ಉಡುಪಿಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಸೃಷ್ಟಿಸಿದ ಸಮಸ್ಯೆಗಳು ಒಂದೆರೆಡೆಲ್ಲ.
ಇನ್ನೂ ಗುಡ್ಡದ ನೀರು ರಬಸವಾಗಿ ಹರಿದ ಪರಿಣಾಮ ಅಲ್ಲಲ್ಲಿ ಭಾರೀ ಕಂದಕ ನಿರ್ಮಾಣವಾಗಿದೆ. ಸುಮಾರು ನೂರು ಮೀಟರ್ ಉದ್ದಕ್ಕೆ ರಸ್ತೆ ಬಿರುಕು ಬಿಟ್ಟಿದೆ. ಗುಡ್ಡದಿಂದ ಭಾರೀ ಪ್ರಮಾಣದ ಕೆಸರು ನೀರು ಹರಿದು ಬಂದಿದ್ದು ರಸ್ತೆಗೆ ದೊಡ್ಡ ದೊಡ್ಡ ಕಲ್ಲುಗಳು ಬಂದು ಬಿದ್ದಿವೆ. ಹೀಗಾಗಿ ಉಡುಪಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಣಿಪಾಲ ಭಾಗದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ.

ರಬಸದಿಂದ ಹರಿದು ಬಂದ ನೀರು ರಸ್ತೆ ಹಾಗೂ ರಸ್ತೆ ಬದಿ ಇರುವ ಅಂಗಡಿಗಳಿಗೆ ನುಗ್ಗಿದೆ. ಹೆದ್ದಾರಿಗೆ ಕಲ್ಲುಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ರಬಸವಾಗಿ ಹರಿಯುವ ನೀರಿನಲ್ಲಿ ವಾಹನಗಳು ಸಂಚಾರ ಮಾಡಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಉಡುಪಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಏಕಾಏಕಿ ಗಾಳಿ ಮಳೆ ಜೊತೆಗೆ ಕೆಸರು ಮಿಶ್ರಿತ ನೀರು ಬಂದ ಕಾರಣ ತಗ್ಗುಪ್ರದೇಶದ ಅಂಗಡಿಗಳು, ಮನೆಗಳು ಜಲಮಯವಾಗಿವೆ. ಮಣಿಪಾಲದಲ್ಲಿ ಇರುವ ಅಪ್ಸರ್ ಐಸ್‌ಕ್ರೀಮ್ ಮಳಿಗೆಗೆ ಕೆಸರು ಮಿಶ್ರಿತ ಮಳೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿಯ ಫ್ರಿಡ್ಜ್ ಕೂಲರ್‌ಗಳು ಹಾನಿಯಾಗಿವೆ.
ವಾಹನ ಸಂಚಾರಕ್ಕೆ ತೊಂದರೆ
ದಕ್ಷಿಣ ಕನ್ನಡದಲ್ಲಿ ಮಳೆಯಿಂದಾಗಿ ಅದ್ಯಪಾಡಿಯಲ್ಲಿ ಭೂಕುಸಿತವಾಗಿದ್ದು ರಸ್ತೆಗಳು ಕೆಸರು ಗದ್ದೆಯಂತಾಗಿದೆ. ಮಂಗಳೂರಿನಲ್ಲಿ ಮೊದಲ ಮಳೆಗೆ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಮಂಗಳೂರು ವಿಮಾನ ನಿಲ್ದಾಣದಿಂದ ಕೆಳಬದಿಗೆ ಬಂದ ಕೆಸರು ಮಿಶ್ರಿತ ನೀರು ರಸ್ತೆಯಲ್ಲಿ ನಿಂತು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದೆ.
ಮಂಗಳೂರು ವಿಮಾನ ನಿಲ್ದಾಣದ ರನ್‌ವೇನಲ್ಲಿ ತುಂಬಿದ ನೀರು ಏಕಾಏಕಿ ಬಿಟ್ಟ ಪರಿಣಾಮ ಕೆಳಭಾಗದಲ್ಲಿ ಇರುವ ಮನೆಗಳಿಗೆ ಕೆಸರು ಮಿಶ್ರಿತ ನೀರು ತುಂಬಿಕೊಂಡಿದೆ. ಇದರಿಂದ ಮನೆಗಳು ಸಂಪೂರ್ಣವಾಗಿ ಕೆಸರು ಮಯವಾಗಿವೆ. ಇನ್ನೂ ಭಾರೀ ಮಳೆ ಗಾಳಿಗೆ ಮಂಗಳೂರಿನ ಕೊಡಿಯಾಲ್ ಎಂಬಲ್ಲಿ ಮನೆಯೊಂದರ ಕಾಂಪೌಡ್ ಕುಸಿದು ಬಿದ್ದು ಶೀಟ್ ಹಾರಿ ಹೋಗಿದೆ. ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಕಳೆದೆ ಮೂರು ದಿನದಿಂದ ಅಧಿಕ ಮಳೆಯಾಗುತ್ತಿದೆ. ಇಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ ಘೋಷಣೆ ಮಾಡಲಾಗಿದೆ. ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನ್ನೂ ಧಾರವಾಡ, ಹಾವೇರಿ, ಹಾಸನ, ಕೊಡಗು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ವಿವಿಧೆಡೆ ಮುಂದಿನ ಮೇ 26ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.












Click it and Unblock the Notifications