ಅಬ್ಬಬ್ಬಾ ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ 40 ಕೋಟಿ ನಷ್ಟ!

ಉಡುಪಿ, ಆಗಸ್ಟ್.16: ರಾಜ್ಯದಲ್ಲಿ ಮಲೆನಾಡು ಶಿವಮೊಗ್ಗ, ಕರಾವಳಿ, ದಕ್ಷಿಣ ಕನ್ನಡ, ಬಳ್ಳಾರಿ, ದಾವಣಗೆರೆ ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಜಿಲ್ಲಾಡಳಿತ ನರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಅಂದಹಾಗೆ ಉಡುಪಿಯಲ್ಲಿ ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, 40 ಕೋಟಿ ರೂ. ಪರಿಹಾರಕ್ಕಾಗಿ ಪ್ರಸ್ತಾವನೆ ಕಳಿಸಲಾಗಿದೆ. ಮುಖ್ಯವಾಗಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದ್ದು, ಈತನಕ ಹಲವು ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ.
ಜಲಾವೃತ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರಿಗೆ ಧೈರ್ಯ ತುಂಬಿದ ಜಯಮಾಲಾ
ಜಿಲ್ಲೆಯಲ್ಲಿ 721 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದ್ದು, ಸ್ಥಳೀಯಾಡಳಿತ ಈ ಮನೆಗಳನ್ನು ಗುರುತಿಸಿ ಪರಿಹಾರ ವಿತರಿಸುವ ಕೆಲಸ ಮಾಡುತ್ತಿದೆ. ಮಳೆಯಿಂದ ಹಾನಿಗೊಂಡ ಮನೆಗಳಿಗೆ 1.66 ಕೋಟಿ ರೂ ಪರಿಹಾರ ವಿತರಿಸಲಾಗಿದೆ. ಕೃಷಿ ಹಾನಿಗೆ 7.64 ಲಕ್ಷ ರೂ ಪರಿಹಾರ ವಿತರಿಸಲಾಗಿದೆ.
ಇನ್ನು ಜಾನುವಾರು ಸಾವಿಗೂ ಪರಿಹಾರ ವಿತರಿಸಲಾಗಿದೆ. ಜಿಲ್ಲೆಯಾದ್ಯಂತ ಈತನಕ ಒಟ್ಟು ಮೂರು ಕೋಟಿಯಷ್ಟು ಪರಿಹಾರ ವಿತರಿಸಲಾಗಿದೆ. ಹಾಗೆಯೇ ಪ್ರಕೃತಿ ವಿಕೋಪ ನಿಧಿಯಿಂದ ಮೃತ ಏಳು ಕುಂಟುಂಬಕ್ಕೆ 35 ಲಕ್ಷ ರೂ ಬಿಡುಗಡೆ ಮಾಡಲಾಗಿದೆ.
ಉಡುಪಿಯಲ್ಲೂ ಅನಾಹುತ ಸೃಷ್ಟಿಸಿದ ಮಳೆ, ರೆಡ್ ಅಲರ್ಟ್ ಘೋಷಣೆ
ಜಿಲ್ಲೆಯ ಹಲವೆಡೆಗಳಲ್ಲಿ ನೆರೆ ಸಮಸ್ಯೆ ಭಾದಿಸಿದ್ದು, ದೇವಸ್ಥಾನಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಇವತ್ತು ಮಳೆಯ ಆರ್ಭಟ ತುಸು ಕಡಿಮೆಯಾಗಿದೆ. ಆದರೆ ನೆರೆಪೀಡಿತ ಪ್ರದೇಶಗಳಲ್ಲಿ ಜನಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.
ಉಸ್ತುವಾರಿ ಸಚಿವರಾದ ಡಾ. ಜಯಮಾಲಾ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು , 40 ಕೋಟಿ ಪರಿಹಾರಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಿಕೊಟ್ಟಿದ್ದಾರೆ.