ಕಲ್ಲಂಗಡಿಯನ್ನು ನೇರ ಗ್ರಾಹಕರಿಗೆ ಮಾರಿದ ಉಡುಪಿ ಕೃಷಿಕ
ಉಡುಪಿ, ಏಪ್ರಿಲ್ 04: ಕೊರೊನಾದಿಂದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೇ ಕೃಷಿಕರು ಕಂಗೆಟ್ಟಿದ್ದಾರೆ. ಆದರೆ ಇಲ್ಲೊಬ್ಬರು ಕೃಷಿ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ರೈತ ತಾನು ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಟದಿಂದ ಕಂಗಾಲಾಗಿರುವ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿವೆ. ಕೊರೊನಾ ವೈರಸ್ ನಿಂದ ರೋಗ ಹರಡುವಿಕೆಯನ್ನು ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಆದ್ದರಿಂದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಅನನುಕೂಲವಾಗಿದೆ. ಅಲ್ಲದೆ, ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ.
ಆದರೆ ಉಡುಪಿ ಜಿಲ್ಲೆಯ ಹಿರಿಯಡಕದ ಸುರೇಶ್ ನಾಯಕ್ 12 ಎಕರೆ ಜಾಗದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು, ಕಟಾವಿಗೆ ಬಂದಿರುವ ಅವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅವರ ಮಿತ್ರರೊಬ್ಬರು ವಾಟ್ಸಪ್ ಗ್ರೂಪ್ ಗಳ ಮೂಲಕ ಮಾಹಿತಿಯನ್ನು ಜನರಿಗೆ ನೀಡಿದ್ದರಿಂದ ಇದೀಗ ಕಿಂಟಲ್ ಗಟ್ಟಲೆ ಕಲ್ಲಂಗಡಿ ಹಣ್ಣುಗಳು ಸುರೇಶ್ ನಾಯಕರ ಗದ್ದೆಯಲ್ಲಿಯೇ ನೇರವಾಗಿ ಮಾರಾಟವಾಗುತ್ತಿವೆ.

ಗದ್ದೆಯಲ್ಲಿ ಕಿಲೋ ಒಂದಕ್ಕೆ ಹತ್ತು ರೂಪಾಯಿಯಂತೆ ದರ ನಿಗದಿಪಡಿಸಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಕಲ್ಲಂಗಡಿ ಹಣ್ಣು ಸಿಗುತ್ತಿದೆ. ಅಲ್ಲದೆ ಸರಿಯಾದ ಮಾರುಕಟ್ಟೆ ಇಲ್ಲದೇ ಕಂಗೆಟ್ಟ ರೈತರಿಗೆ ಇದು ಉತ್ತಮ ಆಲೋಚನೆಯೂ ಆಗಿದೆ.












Click it and Unblock the Notifications