• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇದು ಕಥೆಯಲ್ಲ, ಜೀವನ: ಮಕ್ಕಳೇ ಸೇರಿ ತಾಯಿಯ ಆಸ್ತಿ ಲಪಟಾಯಿಸಿದರು!

By ರಹೀಂ ಉಜಿರೆ
|

ಉಡುಪಿ, ಏಪ್ರಿಲ್ 2: ಕುಟುಂಬಕ್ಕಾಗಿ ತನ್ನ ಗಂಡ ಬಿಟ್ಟು ಹೋದ ಆಸ್ತಿ ಇದ್ದರೂ, 'ಆಸ್ತಿಗಾಗಿ ಜಗಳ'ವಾಡುತ್ತಿರುವ ತನ್ನದೇ ಮಕ್ಕಳಿಂದ ವಂಚನೆಗೆ ಒಳಗಾಗಿರುವ 85 ವರ್ಷದ ಮೋಂತಿನಮ್ಮ ಇದೀಗ ಒಂದು ಹೊತ್ತಿನ ಅನ್ನಕ್ಕೂ ಪರದಾಡುವಂತಾಗಿದೆ.

ಈ ವಯೋವೃದ್ಧೆ ನ್ಯಾಯ ಪಡೆಯಲು 2018ರಲ್ಲೇ ಮಂಗಳೂರಿನ ಹಿರಿಯ ನಾಗರೀಕರ ನ್ಯಾಯ ಮಂಡಳಿಗೆ ದೂರು ನೀಡಿದ್ದರು. ತಮ್ಮ ತಮ್ಮ ಪಾಲಿಗೆ ಬಂದ ಕುಟುಂಬದ ಜಮೀನುಗಳನ್ನು ಪಡೆದ ಮೇಲೂ ತೃಪ್ತರಾಗದ ಮಕ್ಕಳು, ತಾಯಿಯ ಹಿಸ್ಸೆಗೆ ಬಂದ ಜಮೀನುಗಳನ್ನೂ ತಮ್ಮೆಲ್ಲರ ಜಂಟಿ ಹೆಸರಿಗೆ ವರ್ಗಾಯಿಸಿಕೊಂಡರು. ತನಿಖೆ ನಡೆಸಿದ ಹಿರಿಯ ನಾಗರೀಕರ ನ್ಯಾಯಮಂಡಳಿಯು ಪ್ರಕಟಿಸಿದ ತೀರ್ಪಿನಲ್ಲಿ ಎಲ್ಲಾ ಐದು ಮಕ್ಕಳು ತಲಾ 2000 ರೂಪಾಯಿಗಳನ್ನು ಮಾಸಾಶನವಾಗಿ ನೀಡುವಂತೆ ಆದೇಶ ನೀಡಿ ಎರಡು ವರ್ಷಗಳು ಸಂದರೂ, ಯಾವ ಮಕ್ಕಳೂ ತಾಯಿಯ ಪೋಷಣೆ ಮಾಡುತ್ತಿಲ್ಲ.

ಈ ವಯೋವೃದ್ಧೆ ದಿನನಿತ್ಯದ ಖರ್ಚುಗಳಿಗೂ ಇತರರ ಮುಂದೆ ಕೈ ಚಾಚಬೇಕಾಗಿ ಬಂದಿದೆ. ಸದ್ಯ ಈಕೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ.

ಪ್ರಕರಣದ ಹಿನ್ನೆಲೆ

85 ವರ್ಷದ ಹಿರಿಯ ನಾಗರಿಕರಾದ ಮೋಂತಿನ್ ಡಿಸಿಲ್ವ ಕಲ್ಲಮುಂಡ್ಕೂರು ಗ್ರಾಮದ ದಿವಂಗತ ಬ್ಯಾಪ್ಟಿಸ್ಟ್ ಡಿಸಿಲ್ವರ ವಿಧವೆ. ಬ್ಯಾಪ್ಟಿಸ್ಟ್ ದಂಪತಿಗಳು ಸ್ವತಃ ದುಡಿದು ಗಳಿಸಿದ ಹಣದಿಂದ ಮಕ್ಕಳಿಗೆಲ್ಲ ಶಿಕ್ಷಣ ನೀಡಿ, ಮದುವೆ ಮಾಡಿದರು. ಜಮೀನುಗಳನ್ನೂ ಖರೀದಿಸಿದರು. 2006ರಲ್ಲಿ ನಿಧನರಾದ ಬ್ಯಾಪ್ಟಿಸ್ಟ್ ಡಿಸಿಲ್ವ ಕುಟುಂಬಕ್ಕಾಗಿ 6.25 ಎಕರೆ ಜಮೀನು ಹಾಗೂ ಮನೆಯನ್ನು ಬಿಟ್ಟು ಹೋಗಿದ್ದರು. ಕುಟುಂಬದ ಆಸ್ತಿಯಲ್ಲಿ ಪಾಲು ನೀಡಬೇಕೆಂದು ದಿನನಿತ್ಯವೂ ಆಗ್ರಹಿಸುತ್ತಿದ್ದ ಮಕ್ಕಳಿಗೆ ಮಣಿದ ಮೋಂತಿನಮ್ಮ ಪರಸ್ಪರ ಒಪ್ಪಿಗೆಯ ಮೂಲಕ ಜಮೀನುಗಳನ್ನು ಪಾಲು ಮಾಡಿಕೊಳ್ಳುವಂತೆ ಸೂಚಿಸಿದರು.

ಅಕ್ಷರಸ್ಥ ಮಕ್ಕಳು ಮಾಡಿದ ಕಿತಾಪತಿ

2009ರಲ್ಲಿ ಎಲ್ಲಾ ಸದಸ್ಯರು ಸೇರಿ ವಿಭಾಗ ಪತ್ರವೊಂದರ ಮೂಲಕ ವಿವಿಧ ಸರ್ವೆ ನಂಬರ್ ಗಳಲ್ಲಿದ್ದ ಜಮೀನುಗಳನ್ನೆಲ್ಲಾ ವಿಂಗಡಿಸಿ ಅವರವರ ಪಾಲಿಗೆ ಬಂದ ಆಸ್ತಿಗಳನ್ನು ತಮ್ಮ ತಮ್ಮ ಹೆಸರಿಗೆ ವರ್ಗಾಯಿಸಿದರು. ಹಕ್ಕು ಪತ್ರಗಳನ್ನೂ ಮಾಡಿಕೊಂಡರು. ತಾಯಿಯ ಪಾಲಿಗೆ ಬಂದ 2.25 ಎಕರೆ ಜಮೀನು ವಿಂಗಡಿಸಿಟ್ಟರೂ, ಅವರ ಪಾಲಿಗೆ ಬಂದ ಸರ್ವೆ ನಂಬರ್ ಗಳಲ್ಲಿದ್ದ ಜಮೀನುಗಳ ಹಕ್ಕು ಪತ್ರಗಳಲ್ಲಿ ಮೋಂತಿನಮ್ಮನ ಹೆಸರು ದಾಖಲಾಗಲೇ ಇಲ್ಲ. ಬದಲಾಗಿ ತಾಯಿ ಮೋಂತಿನಮ್ಮನ ಪಾಲಿಗೆ ಬಂದ ಜಮೀನುಗಳಿಗೆ "ಎಲ್ಲಾ ಮಕ್ಕಳೂ ಜಂಟಿಯಾಗಿ ಹಕ್ಕುದಾರರು" ಎಂದು ವಿಭಾಗ ಪತ್ರದಲ್ಲೇ ದಾಖಲಿಸಿದರು.

ಹಾಗೆಯೇ ಹಕ್ಕು ಪತ್ರಗಳಲ್ಲೂ ಎಲ್ಲರ ಹೆಸರುಗಳು ಸೇರಿಕೊಂಡವು. ಅಕ್ಷರ ಜ್ಞಾನವಿಲ್ಲದ ಮೋಂತಿನಮ್ಮನಿಗೆ ಅಕ್ಷರಸ್ತ ಮಕ್ಕಳು ಮಾಡಿದ ಕಿತಾಪತಿ ತಿಳಿಯಲೇ ಇಲ್ಲ.

ತಾಯಿಯ ಪೋಷಣೆಯ ಜವಾಬ್ದಾರಿ ಯಾರದ್ದು?

2014ರಲ್ಲಿ ಪುನಃ ಮಕ್ಕಳೆಲ್ಲಾ ಸೇರಿ ತಾಯಿಯನ್ನು ನೋಡಿಕೊಳ್ಳುವರಾರು ಎಂದು ಚರ್ಚಿಸಿದರು. ಜೀವನ ಪರ್ಯಂತ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡ ಮಗಳ ಹೆಸರಿಗೆ ತಾಯಿಯ ಪಾಲಿಗೆ ಸೇರಿದ ಮೂರು ಸರ್ವೆ ನಂಬರ್ ನಲ್ಲಿರುವ ಜಮೀನುಗಳನ್ನು ವರ್ಗಾಯಿಸಿದರು. ಆಗಲೂ ಮೋಂತಿನಮ್ಮನಿಗೆ ಈ ಎಲ್ಲಾ ವಿಚಾರಗಳು ತಿಳಿಯದಿದ್ದರೂ, ಮಕ್ಕಳೆಲ್ಲಾ ಸೇರಿ ತನ್ನ ಅಂತಿಮ ದಿನಗಳನ್ನು ಸುಖವಾಗಿ ಕಳೆಯಲು ವ್ಯವಸ್ಥೆಯೊಂದನ್ನು ರೂಪಿಸುತ್ತಿದ್ದಾರೆ ಎಂದು ಭಾವಿಸಿ ಅವರು ಹೇಳಿದ ದಾಖಲೆಗಳಿಗೆಲ್ಲಾ ಸಹಿ ಹಾಕಿದರು. ತನ್ನ ಪಾಲನೆ ಮಾಡುತ್ತೇನೆಂದು ನಂಬಿಸಿದ ಮಗಳು ಔಷಧೋಪಚಾರಕ್ಕೂ ಹಣ ನೀಡದಿದ್ದಾಗ, ತನ್ನ ಹಿಸ್ಸೆಗೆ ಬಂದ ಆಸ್ತಿಯನ್ನಾದರೂ ಮಾರಿ ಜೀವಿಸುತ್ತೇನೆಂದು ಮೋಂತಿನಮ್ಮ ನಿರ್ಧರಿಸಿದರು. ಆಗಲೇ ತನ್ನ ವೈಯಕ್ತಿಕ ಹೆಸರಿನಲ್ಲಿ ಯಾವುದೇ ಆಸ್ತಿ ಉಳಿದಿಲ್ಲವೆಂದು ಅವರಿಗೆ ತಿಳಿಯಿತು.

ಪೊಲೀಸರಲ್ಲಿ ತಪ್ಪೊಪ್ಪಿಕೊಂಡ ಮಕ್ಕಳು

ತನ್ನ ಬಳಿ ಉಳಿತಾಯವಾಗಲಿ, ಬೇರಾವ ಆದಾಯವಾಗಲಿ ಇಲ್ಲವಾದುದರಿಂದ ತನ್ನ ಪಾಲಿಗೆ ವಿಂಗಡಿಸಿದ್ದ ಆಸ್ತಿಯನ್ನು ಈ ಕೂಡಲೇ ತನಗೆ ಹಿಂದಿರುಗಿಸಬೇಕೆಂದು ಮೋಂತಿನಮ್ಮ ಮಂಗಳೂರಿನ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮನವಿ ಸಲ್ಲಿಸಿದರು. ಪೊಲೀಸ್ ಠಾಣೆಗೂ ದೂರು ನೀಡಿದರು. ಮೇ 30, 2018ರಂದು ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆ ಹಾಗೂ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಕರೆದ ಸಭೆಯಲ್ಲಿ ಭಾಗವಹಿಸಿದ ಮಕ್ಕಳು ತಾವು ಮಾಡಿದ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡರು. ತಾಯಿಯ ಪಾಲಿಗೆ ಬಂದ ಜಮೀನುಗಳನ್ನೆಲ್ಲ ಆರು ತಿಂಗಳೊಳಗೆ ಅವರಿಗೇ ಹಿಂದಿರುಗಿಸಿ, ಆಕೆಯ ಹೆಸರಿನಲ್ಲಿಯೇ ಹಕ್ಕು ಪತ್ರ ಮಾಡಿಸಲು ಲಿಖಿತದಲ್ಲೇ ಒಪ್ಪಿಕೊಂಡರು.

ಹಿರಿಯ ನಾಗರೀಕರ ನ್ಯಾಯ ಮಂಡಳಿಗೆ ದೂರು

ಆರು ತಿಂಗಳು ಕಳೆದರೂ ಮಕ್ಕಳು ತನಗೆ ಆಸ್ತಿ ಹಿಂದಿರುಗಿಸದೇ ಇದ್ದಾಗ ಡಿಸೆಂಬರ್ 12, 2018 ರಂದು ಮೋಂತಿನಮ್ಮ ಮಂಗಳೂರಿನ ಹಿರಿಯ ನಾಗರೀಕರ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು. ಈ ಕುರಿತು ತನಿಖೆ ನಡೆಸಿದ ನ್ಯಾಯ ಮಂಡಳಿಯು ಮಾರ್ಚ್ 5, 2019 ರಂದು ಆದೇಶವೊಂದನ್ನು ಹೊರಡಿಸಿ ಮಕ್ಕಳೆಲ್ಲ ಸೇರಿ ಪ್ರತಿ ತಿಂಗಳು ತಲಾ 2000 ರೂ.ಗಳನ್ನು ಕೊಡುವಂತೆ ಆದೇಶಿಸಿತು. ಅವರ ಜಮೀನು ಹಿಂತಿರುಗಿಸುವ ಕುರಿತು ಟಿಪ್ಪಣಿ ನೀಡಿದ ನ್ಯಾಯ ಮಂಡಳಿ "ಹಿರಿಯ ನಾಗರೀಕರಿಗೆ ಪೋಷಣೆ ಮಾಡದಿದ್ದಲ್ಲಿ ಮಾತ್ರ ಕಾಯಿದೆಯ 23ನೇ ನಿಯಮದಂತೆ ಆದೇಶ ಮಾಡುವುದು ಸಾಧ್ಯ" ಸ್ಪಷ್ಟನೆಯನ್ನೂ ನೀಡಿತ್ತು.

ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದ ಮಕ್ಕಳು

ಹಣ ಕೊಡುವುದು ಅಸಾಧ್ಯ ಎಂದು ಲಿಖಿತದಲ್ಲಿ ನೀಡಿದ್ದರು. ನ್ಯಾಯ ಮಂಡಳಿ ಸ್ಪಷ್ಟ ಆದೇಶ ನೀಡಿ 6 ತಿಂಗಳು ಕಳೆದರೂ ಯಾವ ಮಕ್ಕಳೂ ನಿಯಮಿತವಾಗಿ ಮಾಶಾಸನ ನೀಡದೇ ಇರುವುದರಿಂದ ಮೋಂತಿನಮ್ಮ ಪುನಃ ನ್ಯಾಯ ಮಂಡಳಿಗೆ ದೂರು ನೀಡಿದರು.

ಇದೀಗ ಮೋಂತಿನಮ್ಮನ ಐದು ಮಕ್ಕಳಲ್ಲಿ, ಮೂವರು ನ್ಯಾಯ ಮಂಡಳಿಯ ಅಧ್ಯಕ್ಷರಾದ ಸಹಾಯಕ ಆಯುಕ್ತರಿಗೆ ಪತ್ರ ಬರೆದು "ತಾಯಿಗೆ ಮಾಸಾಶನ ನೀಡುವಂತೆ ಪೋಲೀಸ್ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿಗಳಿಂದ ನೋಟಿಸುಗಳು ಬರುತ್ತಿದ್ದು, ಇವೆಲ್ಲ ನಮಗೆ ಮಾನಸಿಕವಾಗಿ ಅತೀವ ವೇದನೆ ಮತ್ತು ಕಿರಿಕಿರಿ ಉಂಟು ಮಾಡುತ್ತಿವೆ" ಎಂದು ಉತ್ತರಿಸಿ ತಾವು ತಾಯಿಯ ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದು ಲಿಖಿತದಲ್ಲಿ ನೀಡಿದ್ದಾರೆ.

      #BreakingNews: ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ ಟಫ್ ರೂಲ್? | Oneindia Kannada

      ಇದೀಗ, ತನಗೆ ನ್ಯಾಯ ನೀಡುವಂತೆ ಮಂಗಳೂರಿನ ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ನೀಡಲು ಪ್ರತಿಷ್ಠಾನದವತಿಯಿಂದ ಮೋಂತಿನಮ್ಮನಿಗೆ ಕಾನೂನು ನೆರವು ನೀಡಲಾಗಿದೆ. ಆಕೆಗೆ ಸಂಪೂರ್ಣವಾಗಿ ನ್ಯಾಯ ಸಿಗುವ ತನಕ ಮೋಂತಿನಮ್ಮನಿಗೆ ಸಹಕಾರ ನೀಡಲು ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಪಣತೊಟ್ಟಿದೆ.

      English summary
      An elderly mother's Property had took by her children's and cheated, the incident took place in Udupi.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X