ಅಮಿತ್ ಶಾ ಹೇಳಿಕೆ ಹಿಂದಿ ಹೇರಿಕೆ ಅಂತಾ ಭಾವಿಸದಿರಿ; ಶೋಭಾ
ಉಡುಪಿ, ಏಪ್ರಿಲ್ 08; "ವಿವಿಧ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಜನರು ಪರಸ್ಪರ ಸಂಹವನ ನಡೆಸುವಾಗ ಇಂಗ್ಲಿಶ್‌ಗೆ ಪರ್ಯಾಯವಾಗಿ ಹಿಂದಿಯನ್ನು ಬಳಕೆ ಮಾಡಬೇಕು" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಅಮಿತ್ ಶಾ ಹಿಂದಿಯನ್ನು ಹೇರಿಕೆ ಮಾಡುತ್ತಿದ್ದಾರೆ ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನಿಂದಲೂ ಕೇಂದ್ರ ಸರ್ಕಾರ ಕನ್ನಡದ ವಿರುದ್ದ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ದೂರಿತ್ತು.
ಉಡುಪಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ಅಮಿತ್ ಶಾ ಹೇಳಿರುವುದನ್ನು ಹಿಂದಿ ಹೇರಿಕೆ ಎಂದು ಯಾರೂ ಭಾವಿಸಬಾರದು. ಇಡೀ ದೇಶವನ್ನು ಜೋಡಿಸುವ ಭಾಷೆಯ ಅಗತ್ಯತೆ ಇದೆ" ಎಂದರು.

"ಕಠಿಣ ಸಂಸ್ಕೃತ ದೇಶದ ಜನರ ಭಾಷೆಯಾಗಿ ಉಳಿದುಕೊಂಡಿಲ್ಲ. ಸಂಸದೆಯಾದ ನಂತರ ನನಗೆ ಇಡೀ ದೇಶವನ್ನು ಜೋಡಿಸುವ ಭಾಷೆ ಬೇಕು ಎಂದು ಸ್ವಂತ ಅನುಭವಕ್ಕೆ ಬಂದಿದೆ. ಸ್ಥಳೀಯ ಮತ್ತು ಪ್ರಾಂತೀಯ ಭಾಷೆ ನಮಗೆ ಬೇಕೇ ಬೇಕು" ಎಂದು ಶೋಭಾ ಕರಂದ್ಲಾಜೆ ಹೇಳಿದರು.
"ಹೊಸ ಶಿಕ್ಷಣ ನೀತಿಯಲ್ಲಿ ಭಾಷಾ ಕಲಿಕೆಗೆ ಕೇಂದ್ರ ಸರ್ಕಾರ ಒತ್ತುಕೊಟ್ಟಿದೆ. ಸಾರಿ ಮತ್ತು ಥ್ಯಾಂಕ್ಸ್ ಎಂಬ ಇಂಗ್ಲಿಷ್ ಭಾಷೆಯನ್ನು ಬ್ರಿಟಿಷರು ನಮಗೆ ಬಿಟ್ಟು ಹೋಗಿದ್ದಾರೆ. ಭಾರತ ದೇಶವನ್ನು ಜೋಡಣೆ ಮಾಡಲು ಹಿಂದಿ ಆಗಬಹುದು ಎಂದು ಯೋಚನೆ ಮಾಡಬೇಕು. ಯಾವುದೇ ಭಾಷೆಯನ್ನು ಯಾರು ಕಲಿತರೂ ನಷ್ಟ ಇಲ್ಲ" ಎಂದು ತಿಳಿಸಿದರು.
"ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಕಲಿತರೂ ಲಾಭವೇ ಇದೆ. ಸಂಸ್ಕೃತ ದೇಶದ ಭಾಷೆಯಾಗಲು ಸಾಧ್ಯವಿಲ್ಲ ಅದು ಬಹಳ ಕಠಿಣವಾಗಿದೆ. ಇಡೀ ದೇಶ ಅಮಿತ್ ಶಾ ಹೇಳಿದ ಬಗ್ಗೆ ಯೋಚನೆ ಮಾಡಬೇಕು. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹಿಂದಿ ಭಾಷೆಯೂ ಜನರಿಗೆ ಬರೋದಿಲ್ಲ" ಎಂದರು.
"ಇಡೀ ದೇಶವನ್ನು ಒಗ್ಗೂಡಿಸಲು ಹಿಂದಿ ಭಾಷೆ ಎಂಬುದು ಆಲೋಚನೆ ಆಗಿದೆ. ಭಾಷೆಯ ಕಾರಣದಿಂದ ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳು ಜನಕ್ಕೆ ತಲುಪುತ್ತಿಲ್ಲ" ಎಂದು ಶೋಭಾ ಕರಂದ್ಲಾಜೆ ಹೇಳಿದರು.
"ಹಿಂದಿ ಹೇರಿಕೆ ಸಾಂಸ್ಕೃತಿಕ ಭಯೋತ್ಪಾದನೆ" ಎಂದು ಹೇಳಿರುವ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಸಚಿವರು, "ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ಸಾವರ್ಕರ್ ಹೆಸರು ತಂದಿದ್ದಾರೆ. ಅಲ್ ಖೈದಾ ಅಂದಾಗ ಸಿದ್ದರಾಮಯ್ಯ ಆರೆಸ್ಸೆಸ್ ಅಂತಾ ಹೇಳುತ್ತಾರೆ. ಹಿಂದಿಯ ವಿಚಾರ ಬಂದಾಗ ಸಾವರ್ಕರ್ ಹೆಸರು ಹೇಳುತ್ತಾರೆ. ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ" ಎಂದು ದೂರಿದರು.
"ಸಿದ್ದರಾಮಯ್ಯ ತಮ್ಮ ಬಗ್ಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಎಲ್ಲಿದ್ದಾರೆ, ಯಾವ ಜಾಗದಲ್ಲಿದ್ದಾರೆ,ಯಾವ ಜವಾಬ್ದಾರಿಯಲ್ಲಿದ್ದಾರೆ, ಯಾವ ಪಕ್ಷದಲ್ಲಿದ್ದಾರೆ ಅಂತಾ ಯೋಚನೆ ಮಾಡಲಿ. ಅವರು ಯೋಚನೆ ಮಾಡಿ ಮಾತನಾಡಬೇಕು, ಗೌರವ ಹೆಚ್ಚಾಗುತ್ತದೆ. ಸಿದ್ದರಾಮಯ್ಯ ಮಾತನಾಡುವ ಭಾಷೆ ಮತ್ತು ವಿಚಾರದಿಂದ ನಮಗೆ ಯಾರಿಗೂ ನಷ್ಟವಿಲ್ಲ" ಎಂದರು.












Click it and Unblock the Notifications