ಉಡುಪಿ; ಕೇರಳದಿಂದ ಬರುವವರಿಗೆ ಕೋವಿಡ್ ವರದಿ ಕಡ್ಡಾಯ
ಉಡುಪಿ, ಏಪ್ರಿಲ್ 19; "ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನಗೆಟಿವ್ ವರದಿಯನ್ನು ತರಬೇಕು" ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು, "ಬೆಂಗಳೂರಿನಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಬೆಂಗಳೂರಿನಿಂದ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ಕರೆ ನೀಡಿದರು.
"ಸಾರ್ವಜನಿಕರು ಕುಟುಂಬದ ಹಿತದೃಷ್ಟಿಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತೇವೆ" ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

"ಸಮುದಾಯಕ್ಕೆ ಕೊರೊನಾ ಹಬ್ಬುವುದನ್ನು ತಡೆಯಬೇಕಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 3000 ಸ್ವಾಬ್ ಟೆಸ್ಟ್ ಮಾಡುತ್ತಿದ್ದೇವೆ. ಯಾವುದೇ ಒಂದು ಪ್ರದೇಶದಲ್ಲಿ ಹೆಚ್ಚು ಕೇಸುಗಳು ಪತ್ತೆಯಾಗುತ್ತಿಲ್ಲ. ಜಿಲ್ಲೆಯ ಅಲ್ಲಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ" ಎಂದರು.
"ಇಂದು ಎರಡು ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡುತ್ತಿದ್ದೇವೆ. ಕೇವಲ ಐದು ಪ್ರಕರಣ ಬಂದ ಪರಿಸರದಲ್ಲೂ ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡಲಾಗುತ್ತದೆ. ಎಂಐಟಿ ಎರಡು ದಿನದಲ್ಲಿ ಕಂಟೈನ್ಮೆಂಟ್ ಮುಕ್ತವಾಗಲಿದೆ" ಎಂದು ವಿವರಣೆ ನೀಡಿದರು.
"ಜಿಲ್ಲೆಯಲ್ಲಿ ಐಸಿಯುಗಳ ಕೊರತೆಯಿಲ್ಲ. ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಕೂಡ ಪರಿಪೂರ್ಣವಾಗಿದೆ. ಆದರೆ, ಜಿಲ್ಲೆಯ ಜನ ಮೈಮರೆಯಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ, ಜನ ಸೇರುವ ಸ್ಥಳಗಳಿಗೆ ಹೋಗಬೇಡಿ" ಎಂದು ಮನವಿ ಮಾಡಿದರು.












Click it and Unblock the Notifications