ಹೊರ ಜಿಲ್ಲೆಗಳ ಪಾಸುಗಳಿದ್ದರೂ ಉಡುಪಿಗೆ ಜನರು ಬರುವಂತಿಲ್ಲ
ಉಡುಪಿ, ಏಪ್ರಿಲ್ 13 : ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯೊಳಗೆ ಸೋಂಕು ಕಂಡು ಬರುವ ಸಾಧ್ಯತೆ ಕಡಿಮೆ ಇದೆ. ಹೊರ ಜಿಲ್ಲೆಯಿಂದ ಬರುವವರ ಮೂಲಕ ಮಾತ್ರ ಕಂಡು ಬರುವ ಸಾಧ್ಯತೆಗಳಿವೆ.
ಉಡುಪಿ ಜಿಲ್ಲೆಯೊಳಗೆ ಪ್ರವೇಶ ಮಾಡಲು ಜನರು ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಬರುತ್ತಿದ್ದಾರೆ ಎಂಬುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಜಿಲ್ಲೆಯ ಜನರ ಆರೋಗ್ಯದ ದೃಷ್ಠಿಯಿಂದ ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಜಿಲ್ಲೆಯೊಳಗೆ ಪ್ರವೇಶ ಮಾಡುವವರಿಗೆ ಚೆಕ್‍ಪೋಸ್ಟ್‌ನಲ್ಲಿ ಅನುಮತಿ ನೀಡುವುದಿಲ್ಲ.
"ಹೊರ ಜಿಲ್ಲೆಗಳಿಂದ ಪಾಸು ಪಡೆದು ಬರುವಂತಹ ಜನರ ಪಾಸ್ ಗಳನ್ನು ಮಾನ್ಯ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶ ಮಾಡಿದಲ್ಲಿ, ಅವರನ್ನು 14 ದಿನಗಳ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸುವುದಾಗಿ" ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ವ್ಯಾಪ್ತಿಯೊಳಗೆ ಮಣಿಪಾಲ್ ಆಸ್ಪತ್ರೆಯಿದೆ. ಅತ್ಯಂತ ಗಂಭೀರ ಮತ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆ.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 3 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಇವರಲ್ಲಿ ಒಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಗೊಂಡಿದ್ದಾರೆ. ಇನ್ನಿಬ್ಬರು ಸಹ ಅರೋಗ್ಯದಿಂದ ಇದ್ದು ಅವರ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.
ಈ ಮೂರು ಪ್ರಕರಣಗಳು ಜಿಲ್ಲೆಯ ಹೊರಗಿನಿಂದ ಬಂದ ಪ್ರಕರಣಗಳಾಗಿವೆ. ಜಿಲ್ಲೆಯ ಒಳಗೆ ಯಾವುದೇ ಕೊರೊನಾ ಪ್ರಕರಣ ಕಂಡು ಬರುವ ಸಾಧ್ಯತೆಗಳು ಇಲ್ಲವಾಗಿದ್ದು, ಅಕಸ್ಮಾತ್ ಕಂಡು ಬಂದಲ್ಲಿ ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕಂಟೈನ್‍ಮೆಂಟ್ ಪ್ಲಾನ್ ಸಿದ್ದಪಡಿಸಲಾಗಿದೆ.
ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದೆ. ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ. ಆರ್. ಪಿ. ಸಿ ಸೆಕ್ಷನ್ 144 (3) ರಂತೆ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ.












Click it and Unblock the Notifications