Udupi: ತೆಂಕನಿಡಿಯೂರು ಗ್ರಾಮ ಪಂಚಾಯತ್ ಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಬಡಿದಾಟ
ಉಡುಪಿ, ಜುಲೈ 13: ತುಂಬಿದ ಸಭೆಯಲ್ಲಿ ಜನಪ್ರತಿನಿಧಿಗಳು ಕೊರಳಪಟ್ಟಿ ಹಿಡಿದು ಕಿತ್ತಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಕಾಂಗ್ರೆಸ್ -ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರು ಸಭೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಪಂಚಾಯತ್ ವ್ಯಾಪ್ತಿಯ ತ್ಯಾಜ್ಯದ ಅಸಮರ್ಪಕ ವಿಲೇವಾರಿ ವಿಚಾರದಲ್ಲಿ ಆರಂಭವಾದ ಈ ಗಲಾಟೆ ಸದಸ್ಯರ ಹೊಡೆದಾಟದಲ್ಲಿ ಮುಕ್ತಾಯಗೊಂಡಿದೆ.
ಉಡುಪಿಯ ತೆಂಕನಿಡಿಯೂರು ಗ್ರಾಮ ಪಂಚಾಯತ್ ಕಳೆದ ಒಂದು ತಿಂಗಳಿಂದ ಕಾಂಗ್ರೆಸ್-ಬಿಜೆಪಿ ಸದಸ್ಯರ ಬಡಿದಾಟದ ವೇದಿಕೆಯಾಗಿದೆ. ಪಂಚಾಯತ್ ಅಧ್ಯಕ್ಷ ಶೋಭಾ ಡಿ.ನಾಯ್ಕ್ ಈ ಒಟ್ಟು ವಿವಾದದಕ್ಕೆ ಮುಖ್ಯ ಕಾರಣವಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯ ಆಗಿ ಪಂಚಾಯತ್ ಅಧ್ಯಕ್ಷ ಸ್ಥಾನ ಪಡೆದಿದ್ದ ಶೋಭಾ ಡಿ.ನಾಯ್ಕ್ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವನ್ನು ಅಸಮರ್ಪಕವಾಗಿ ವಿಲೇವಾರಿ ಮಾಡಿದ್ದರು. ಸುಮಾರು 50 ಲೋಡು ತ್ಯಾಜ್ಯವನ್ನು ಹೊಂಡ ತೆಗೆದು ಹೂಳಿದ್ದರು. ಇದರ ಪರಿಣಾಮ ಪರಿಸರದ ಕುಡಿಯುವ ನೀರು ಬಾವಿಯ ನೀರು ಮಲಿನಗೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಹೋರಾಟ ನಡೆಸಿದ್ದರು.
ಬದಲಾದ ಸನ್ನಿವೇಶದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದರು. ಇದೀಗ ಗ್ರಾಮಸ್ಥರ ಹೋರಾಟಕ್ಕೆ ಬಿಜೆಪಿ ಸದಸ್ಯರು ಹಾಗೂ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಪಂಚಾಯತ್ ಅಧ್ಯಕ್ಷರ ವಿರುದ್ಧ ಸಿಡಿಮಿಡಿ ಕೊಂಡಿದ್ದಾರೆ. ಹೊಂಡ ತೆಗೆದು ಉಳಿದ ಕಸವನ್ನು ತೆರವು ಮಾಡಿ ಪರಿಸರದ ಮಾಲಿನ್ಯವನ್ನು ನಿಯಂತ್ರಿಸಬೇಕು ಎಂದು ಹೋರಾಟ ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಿನ್ನೆ ಜುಲೈ 12ರಂದು ವಿಶೇಷ ಸಾಮಾನ್ಯ ಸಭೆ ನಿಗದಿಯಾಗಿತ್ತು. ಬಿಜೆಪಿ ಬೆಂಬಲಿತ ಮೂವರು ಸದಸ್ಯರ ವಿರುದ್ಧ ಈ ವಿಚಾರವಾಗಿ ಪ್ರಕರಣ ದಾಖಲಾಗಿರುವುದರಿಂದ, ಸಭೆ ನಡೆಸಬಾರದೆಂದು ಬಿಜೆಪಿಯ ಸದಸ್ಯರು ಶೋಭಾ ನಾಯ್ಕ್ ವಿರುದ್ಧ ತಿರುಗಿಬಿದ್ದರು. ಒಂದೂವರೆ ಗಂಟೆಗಳ ಕಾಲ ಅವರನ್ನು ಸುತ್ತುವರಿದು ಗಲಾಟೆ ನಡೆಸಿದರು.
ಕಾಂಗ್ರೆಸ್ ಬೆಂಬಲಿತ ಸದಸ್ಯರು ಮಾತ್ರ ಕೋರಂ ಇಲ್ಲದಿದ್ದರೂ ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ಗಲಾಟೆ ತಾರಕಕ್ಕೇರಿ ಎರಡು ಪಕ್ಷದ ಬೆಂಬಲಿತ ಸದಸ್ಯರು ಹೊಡೆದಾಡಿಕೊಂಡರು. ಕೊನೆಯಲ್ಲಿ ಸ್ಥಳೀಯ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಅಂತಿಮವಾಗಿ ಜನಪ್ರತಿನಿಧಿಗಳ ಕಿತ್ತಾಟದಲ್ಲಿ ಗ್ರಾಮಸ್ಥರ ಮೂಲ ಸಮಸ್ಯೆ ಬಗೆಹರಿಯದೆ ಹಾಗೆ ಬಾಕಿ ಉಳಿಯಿತು.












Click it and Unblock the Notifications