CM Siddaramaiah: ಉಡುಪಿ & ಮಂಗಳೂರು ಸಭೆಯ ಪ್ರಮುಖ ಅಂಶಗಳಿವು
ಉಡುಪಿ, ಆಗಸ್ಟ್, 01: ಉಡುಪಿ ಹಾಗೂ ಮಂಗಳೂರು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಗಳು. ಆದರೆ ಉಡುಪಿ ಜಿಲ್ಲೆ ಪ್ರಗತಿಪರಜಿಲ್ಲೆಯಾಗಿದ್ದರೂ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಕುಂಠಿತಗೊಂಡಿದೆ. ಜಿಲ್ಲೆಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಉಡುಪಿಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂದ ಶೇಕಡಾ 53ರಷ್ಟು ಮಳೆ ಕಡಿಮೆ ಮಳೆಯಾಗಿದ್ದು, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇಕಡಾ 25ರಷ್ಟು ಹೆಚ್ಚು ಮಳೆಯಾಗಿದೆ. ಸುಮಾರು ಶೇಕಡಾ 79ರಷ್ಟು ಬಿತ್ತನ ಕಾರ್ಯ ಮುಗಿದಿದೆ ಎಂದರು.

ಬೀಜ, ಗೊಬ್ಬರ ರಸಾಯನಿಕಗಳಿಗೆ ಇಲ್ಲಿಯವರೆಗೆ ಕೊರತೆಯಾಗಿಲ್ಲ. ಬೆಳೆಹಾನಿಯಾಗಿದ್ದರೆ ಮರು ಬಿತ್ತನೆ ಅಥವಾ ಪರ್ಯಾಯ ಬೆಳೆ ಬೆಳೆಯಲು ಬೀಜ, ಗೊಬ್ಬರ ರಸಾಯನಿಕಗಳನ್ನು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ಜುಲೈ ತಿಂಗಳ ವೇಳೆಗೆ ಶೇಕಡಾ 75ರಷ್ಟು ಬಿತ್ತನೆಯಾಗಿದ್ದು, ಈ ವರ್ಷ ಶೇಕಡಾ 79ರಷ್ಟು ಬಿತ್ತನೆಯಾಗಿದೆ. ಸುಮಾರು 10 ಜನರ ಪ್ರಾಣ ಹಾನಿಯಾಗಿದ್ದು, ಅವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಕಾಲುಸಂಕಗಳ ನಿರ್ಮಾಣಕ್ಕೆ ಕ್ರಮ
ಕಾಲುಸಂಕಗಳು ಸಮರ್ಪಕವಾಗಿಲ್ಲದಿರುವ ಕಾರಣ ಜನರ ಓಡಾಟಕ್ಕೆ ತೊಂದರೆಯಾಗಿದೆ. ಆದ್ದರಿಂದ ನರೇಗಾ ಮತ್ತು ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಕಾಲು ಸಂಕಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ ನಿರ್ಮಾಣ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ. ಒಂದು ಕಾಲಸಂಕ ನಿರ್ಮಿಸಲು ಸುಮಾರು 5ರಿಂದ 10 ಲಕ್ಷ ರೂಪಾಯಿಗಳು ವೆಚ್ಚ ಆಗಲಿದೆ ಎಂದರು.
ಆರೋಗ್ಯ ಸೂಚ್ಯಂಕದಲ್ಲಿ ಕುಸಿತ
ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ 2023ರಲ್ಲಿ 13ನೇ ಸ್ಥಾನಕ್ಕೆ ಇಳಿದಿದೆ. 2015ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಒಂದನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈಗ 19ನೇ ಸ್ಥಾನಕ್ಕಿಳಿದಿದೆ. 2015-16ರಲ್ಲಿ ತಾಯಂದಿರ ಮರಣ 1000ರಲ್ಲಿ 14 ಮಂದಿ ಇತ್ತು. 2021-22ರಲ್ಲಿ ಮರಣ ಪ್ರಮಾಣ 126ಕ್ಕೆ ಏರಿಕೆಯಾಗಿದ್ದು, 2023ರಲ್ಲಿ 53 ಮರಣ ಸಂಭವಿಸಿದೆ. 2015-16ರಲ್ಲಿ ಮಕ್ಕಳ ಸಾವಿನ ಪ್ರಮಾಣ 51 ಇದ್ದು, 2022-23ರಲ್ಲಿ 166 ಮಕ್ಕಳು ಮರಣ ಹೊಂದಿದ್ದಾರೆ. ಇದು ನಮ್ಮ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ವ್ಯತ್ಯಾಸವನ್ನು ಬಿಂಬಿಸುತ್ತದೆ ಎಂದು ವಿವರಿಸಿದರು.
ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲಕೊರತೆಗಳ ಸಮಸ್ಯೆಯಿದೆ. ಉಡುಪಿ ಜಿಲ್ಲೆಯಲ್ಲಿ 98 ಕಿಲೋ ಮೀಟರ್‌ಗಳ ಕಡಲ ತೀರವಿದೆ. 3 ಜಿಲ್ಲೆಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲು ಲೋಕೋಪಯೋಗಿ ಇಲಾಖೆಗೆ ಡಿಪಿಆರ್ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ, ರಸ್ತೆ ಅಪಘಾತಗಳು, ಸಾವಿನ ಪ್ರಮಾಣ ಹೆಚ್ಚಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಲೋಕೋಪಯೋಗಿ ಇಲಾಖೆಯವರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜಿಲ್ಲಾಮಟ್ಟದ ಆಡಳಿತವನ್ನು ಚುರುಕುಗೊಳಿಸಲು ನಿರ್ಲಕ್ಷ್ಯತನ, ಉದಾಸೀನತೆ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೊಳ್ಳಲಾಗುವುದು ಎಂದರು.
ಪರಿಶೀಲನಾ ಸಭೆಯ ಮುಖ್ಯಾಂಶಗಳು
ಮಾದಕ ವಸ್ತು ಹಾವಳಿ ಮಂಗಳೂರಿನಲ್ಲಿ ವಿಪರೀತವಾಗಿ ಹೆಚ್ಚಾಗುತ್ತಿದೆ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪೊಲೀಸ್ ಆಯುಕ್ತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಆಯುಕ್ತರ ಉತ್ತರದಿಂದ ಸಮಾಧಾನಗೊಳ್ಳದ ಮುಖ್ಯಮಂತ್ರಿಗಳು ಗೂಂಡಾ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
1. ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಗುಂಪು, ಸಿದ್ದಾಂತದವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ ಗಿರಿ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ.
2. ಮಳೆಯಿಂದ ಪೂರ್ತಿ ಹಾನಿಯಾದ ಮನೆಗಳಿಗೆ 5 ಲಕ್ಷ ರೂಪಾಯಿ ಪರಿಹಾರಕ್ಕೆ ಇಂದೇ ಆದೇಶ ಹೊರಡಿಸುತ್ತೇನೆ.
3. ಮೊದಲಿದ್ದ ರೀತಿಯಲ್ಲೇ ಎ, ಬಿ, ಸಿ ಕೆಟಗರಿಯಲ್ಲಿ ವಿಂಗಡಿಸಿ ಪರಿಹಾರ ನೀಡಲು ಸೂಚನೆ.
4. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಮಗ್ರ ಚರ್ಚೆ ಮಾಡಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.
5. ತಾಯಿ ಮಕ್ಕಳ ಮರಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದಕ್ಕೆ ಎಂ.ಎಂ.ಆರ್ ಸಮೀಕ್ಷೆಯ ವರದಿಯನ್ನು ಓದಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಹಾಗೆಯೇ ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಇನ್ಮುಂದೆ ಅವರಿಗೆ ನೀಡಿದ ಕ್ವಾಟ್ರಸ್‌ಳಲ್ಲೇ ನೆಲೆಸುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
6. ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಒಮ್ಮೆ ಬೀಜ, ರಸಗೊಬ್ಬರ ಕೊಟ್ಟರೆ ಮುಗಿಯಿತು ಎಂದು ಅಧಿಕಾರಿಗಳು ವರ್ತಿಸಬಾರದು. ಬೆಳೆಹಾನಿಯಾಗಿ ಮತ್ತೆ ಬೀಜ, ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ಬಂದರೆ ಅದನ್ನು ಪೂರೈಸಬೇಕು. ಅಡಕೆಗೆ ಎಲೆಚುಕ್ಕೆ ರೋಗ, ಹಳದಿ ರೋಗ, ಕೀಟ ಬಾದೆ ಯಾವ ಪ್ರಮಾಣದಲ್ಲಿ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಪಡೆದ ಮುಖ‍್ಯಮಂತ್ರಿಗಳು ಈ ಸಂಬಂಧ ಕೃಷಿ ವಿಜ್ಞಾನಗಳು ಹಾಗೂ ತಜ್ಞರನ್ನು ಕರೆದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
7. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್‌ನಿಂದ 2 ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಿದ್ದೇವೆ. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂಪಾಯಿಗಳಷ್ಟು ನೆರವು ನೀಡಿದ್ದೇವೆ. ಇದು ಮೀನುಗಾರ ಸಮುದಾಯಕ್ಕೆ ತಲುಪುತ್ತದೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇದರಿಂದ ಸಮುದಾಯಕ್ಕೆ ದೊಡ್ಡ ಅನುಕೂಲ ಆಗಿದೆ ಎಂದರು.
ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂಪಾಯಿ ಸಹಾಯಧನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂಪಾಯಿ ಸಹಾಯಧನ ಒದಗಿಸಲಾಗುವುದು ಎಂದು ನಾವು ಅಯವ್ಯವಯದಲ್ಲಿ ಘೋಷಿಸಿದ್ದೇವೆ. ಈ ಕಾರ್ಯಕ್ರಮ ಸರಿಯಾಗಿ ಜಾರಿಯಾಗುವಂತೆ ಕ್ರಮ ವಹಿಸಲು ಅಧಿಕಾರಿಗಳು ಸೂಚಿಸಿದರು.
8. ಇನ್ನು ಶಕ್ತಿ ಯೋಜನೆಗೆ ಜನರಿಂದ ಮತ್ತು ವಿದ್ಯಾರ್ಥಿ ಸಮೂಹದಿಂದ ಉತ್ತಮ ಸ್ಪಂದನೆ ಇರುವುದರಿಂದ ಸದ್ಯದಲ್ಲೇ 4000 ಹೆಚ್ಚುವರಿ ಬಸ್‌ಗಳನ್ನು ಖರೀದಿಸುವುದಾಗಿ ಸಿಎಂ ತಿಳಿಸಿದರು. ಹಾಗೆಯೇ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಲಾಭವನ್ನು ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗೂ ದೊರಕುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಅಧಿಕಾರಿಗಳಿಗೆ ಸಿಎಂ ತರಾಟೆ
ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯಂತ ಹಿಂದುಳಿಯುತ್ತಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಗ್ರಾಮ ಪಂಚಾಯ್ತಿ ಕಟ್ಟಡವೊಂದರ ಉದ್ಘಾಟನೆ ತಡೆ ಹಿಡಿದಿದ್ದಕ್ಕೆ ಕಾರಣ ಏನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಎಂ ಯಾವುದೇ ಕಾರಣಕ್ಕೂ ಪ್ರೋಟೋಕಾಲ್ ಉಲ್ಲಂಘಿಸಬಾರದು. ಶಾಸಕರು ಯಾವುದೇ ಪಕ್ಷದವರಿರಲಿ ಅವರನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಎಂದು ಪರಿಗಣಿಸಿ. ಅವರಿಗೆ ಗೌರವ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸರಕಾರಿ ಆರೋಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಿದ್ದ ವೇಳೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು, "ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಖಾಲಿ ಇರುವ ಎಲ್ಲಾ ವೈದ್ಯ ಹುದ್ದೆಗಳನ್ನು ಒಂದೇ ದಿನದಲ್ಲಿ ಭರ್ತಿ ಮಾಡಿ." ಎಂದು ಮನವಿ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕಳೆದ 5 ವರ್ಷದಿಂದ ನಿಮ್ಮದೇ ಸರ್ಕಾರ ಇತ್ತು. 5 ವರ್ಷದಲ್ಲಿ ಮಾಡದ್ದನ್ನು ನಮಗೆ ಒಂದೇ ದಿನದಲ್ಲಿ ಮಾಡಲು ಹೇಳುತ್ತಿದ್ದೀರಿ ಎಂದರು.












Click it and Unblock the Notifications