ಹಾಡಹಗಲೇ ಮಣಿಪಾಲದಲ್ಲಿ ಇಸ್ಪೀಟ್ ಕ್ಲಬ್ ಮಾಲೀಕನ ಹತ್ಯೆ
ಉಡುಪಿ, ಜುಲೈ 29 : ಮಣಿಪಾಲದಲ್ಲಿ ಹಾಡ ಹಗಲೇ ಇಸ್ಪೀಟ್ ಕ್ಲಬ್ ಮಾಲೀಕನ ಹತ್ಯೆ ನಡೆದಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಮಣಿಪಾಲ ಸಮೀಪದ ಇಸ್ಪೀಟ್ ಕ್ಲಬ್‌ನಲ್ಲಿ ಮಾಲೀಕ ಗುರುಪ್ರಸಾದ್ ಭಟ್ (45) ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಮೃತ ಗುರುಪ್ರಸಾದ್ ಭಟ್ ಉಡುಪಿಯ ಪುತ್ತೂರು ಗ್ರಾಮದವರು. ಗುರುಪ್ರಸಾದ್ ಅವರು ಕ್ಲಬ್‌ನಲ್ಲಿ ಇದ್ದ ವೇಳೆ ಮಾರುತಿ ಓಮಿನಿಯಲ್ಲಿ ಆಗಮಿಸಿದ ದುಷ್ಕರ್ಮಿಗಳು ಕ್ಲಬ್‌ಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಗಂಭೀರವಾಗಿ ಗಾಯಗೊಂಡ ಗುರುಪ್ರಸಾದ್ ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭವಾಗಿದೆ.
ಗುರುಪ್ರಸಾದ್ ಹಣದ ವ್ಯವಹಾರವನ್ನೂ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ. ಕೆಲ ವರ್ಷಗಳ ಹಿಂದೆ ಇವರು 'ಸತ್ಯ ನ್ಯೂಸ್' ಎಂಬ ವಾರ ಪತ್ರಿಕೆಯನ್ನೂ ನಡೆಸುತ್ತಿದ್ದರು. ಇನ್ನು ವಿಷಯ ತಿಳಿದ ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮಣಿಪಾಲ ಇನ್ ಸ್ಪೆಕ್ಟರ್ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications