ಮೇಯಲು ಬಂದ ಹಸುಗಳ ಮೇಲೆ ಗುಂಡು ಹಾರಿಸಿದ ನಿರ್ದಯಿ: ನಾಲ್ಕು ಗೋವುಗಳ ದುರ್ಮರಣ
ಉಡುಪಿ, ಸೆಪ್ಟೆಂಬರ್ 30: ಮೇಯಲು ಬಂದ ಹಸುಗಳ ಮೇಲೆ ಜಮೀನ ಮಾಲೀಕ ಗುಂಡು ಹಾರಿಸಿ ಕೊಂದು ಹಾಕಿರುವ ಅಮಾನವೀಯ ಕೃತ್ಯದ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.
ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಪರಿಸರದ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಗೋವುಗಳ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಬೆಳ್ಳಾಲದ ಗುಲಾಬಿ ಎಂಬ ಮಹಿಳೆಯ ಹುಸುಗಳು ನರಸಿಂಹ ಎಂಬಾತನ ಜಮೀನಿಗೆ ಮೇಯಲು ಹೋಗಿದ್ದವು. ಈ ವೇಳೆ ಕೋಪಗೊಂಡ ನರಸಿಂಹ ನಾಡ ಕೋವಿಯಿಂದ ಹಸುಗಳಿಗೆ ಗುಂಡು ಹಾರಿಸಿದ್ದಾನೆ. ಜಮೀನಿನ ಮಾಲೀಕನ ದುರುಳ ತನಕ್ಕೆ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. ಸುಮಾರು ಆರು ಹಸುಗಳಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮತ್ತೆರಡು ಹಸುಗಳು ಸಾವನ್ನಪ್ಪಿದ್ದವು.

ನಾಲ್ಕು ಹಸುಗಳನ್ನು ಕಳೆದುಕೊಂಡ ಮಾಲೀಕರು ಕೇಳಿದಾಗ ಹಸುಗಳ ಮಾಲೀಕರ ತಲೆಗೆ ಕೋವಿಯಿಂದ ಗುರಿಯಿಟ್ಟು ಜೀವ ಬೆದರಿಕೆ ಹಾಕಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಪರಿಸರದಲ್ಲಿ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.











Click it and Unblock the Notifications