ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾದಯಾತ್ರೆ ನಡೆಸಿದ ಶಾಸಕ
Recommended Video

ಉಡುಪಿ, ಜೂನ್.27: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಪಾದಯಾತ್ರೆ ನಡೆಸಿದ್ದಾರೆ. ನೂರಾರು ಕಾರ್ಯಕರ್ತರ ಜೊತೆಯಲ್ಲಿ ಬೈಂದೂರಿನ ನೆಂಪು ಎಂಬ ಹಳ್ಳಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕವೇ ಹೋಗಿದ್ದಾರೆ.
ಮಳೆಯನ್ನೂ ಲೆಕ್ಕಿಸದೆ ಸುಮಾರು 25 ಕಿಮೀ ವರೆಗೆ ನಡೆದು ಸಾಗಿದ್ದಾರೆ. ಸೌಪರ್ಣಿಕಾ ನದಿಯಲ್ಲಿ ಮಿಂದು ಮುಕಾಂಬಿಕೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿಯವರು ಭ್ರಷ್ಟಚಾರ ರಹಿತ ಆಡಳಿತ ನೀಡಿದ್ದು, ಮುಂದಿನ ಚುನಾವಣೆಯಲ್ಲೂ ಅವರಿಗೆ ಜನಾದೇಶ ದೊರಕಲಿ ಎಂದು ಈ ವೇಳೆ ಸಂಕಲ್ಪಿಸಲಾಯ್ತು.

ಅಂತೆಯೇ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಆಡಳಿತ ಸ್ಥಾಪನೆಯಾಗಲಿ ಎಂದು ಹರಕೆ ಹೊತ್ತು ಪೂಜೆ ಸಲ್ಲಿಸಲಾಯ್ತು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕೊಲ್ಲೂರು ಕ್ಷೇತ್ರದ ಮಾಜಿ ಧರ್ಮದರ್ಶಿಯಾಗಿದ್ದು, ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಪಾದಯಾತ್ರೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.












Click it and Unblock the Notifications