ಸಿಎಂಗೆ ಸಿದ್ದು ರೆಹಮಾನ್ ಅಂತ ಹೆಸರಿಡಬೇಕಿತ್ತು: ಈಶ್ವರಪ್ಪ
ಉಡುಪಿ, ಮಾರ್ಚ್ 6: ಮುಖ್ಯಮಂತ್ರಿ ಯವರಿಗೆ ಸಿದ್ದರಾಮಯ್ಯ ಅಂತ ಅವರ ತಂದೆ ತಾಯಿ ತಪ್ಪಾಗಿ ಹೆಸರಿಟ್ಟಿದ್ದಾರೆ. ಸಿದ್ದು ರೆಹಮಾನ್ ಅಂತ ಹೆಸರಿಡಬೇಕಿತ್ತು ಎಂದು ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಸೋಮವಾರ ಜನಸುರಕ್ಷಾ ಯಾತ್ರೆಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. "ಸಿದ್ದರಾಮಯ್ಯ ಅವರೇ ದೇವೇಗೌಡರಿಗೆ ಟೋಪಿ ಹಾಕಿದ್ದೀರಿ. ಆರ್.ಎಸ್.ಎಸ್ ಬ್ಯಾನ್ ಮಾಡೋ ಕನಸನ್ನು ಬಿಟ್ಟುಬಿಡಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಮಠ ಮಂದಿರ ಸಿದ್ದರಾಮಯ್ಯನ ಅಪ್ಪನ ಮನೆ ಆಸ್ತಿನಾ?" ಎಂದು ವಾಗ್ದಾಳಿ ನಡೆಸಿದ ಅವರು, "ಕೊರಟಗೆರೆಯಲ್ಲಿ ಸಿದ್ದರಾಮಯ್ಯ ಪರಮೇಶ್ವರ್ ನ ಸೋಲಿಸಿದ್ರು. ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ" ಎಂದು ಲೇವಡಿ ಮಾಡಿದರು.

ಕಳೆದ ಬಾರಿ ಬಿಜೆಪಿ - ಕೆಜೆಪಿ ಒಡೆದು ಹೋಗಿ ಕಾಂಗ್ರೆಸ್ ಸರ್ಕಾರ ಬಂತು ಎಂದು ಹೇಳಿದ ಅವರು, ಸಿದ್ದರಾಮಯ್ಯ , ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಎಂದು ಹೇಳಿದರು.
ಈ ನಡುವೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ನಟ ಉಪೇಂದ್ರ ಬಿ.ಜೆ.ಪಿ ಪಕ್ಷ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದರು. "ಬಿ.ಜೆ.ಪಿ ಒಂದು ರಾಷ್ಟ್ರೀಯ ಪಕ್ಷ. ಭಾರತೀಯ ಜನತಾ ಪಾರ್ಟಿ ಒಂದು ಸಮುದ್ರ ಇದ್ದಂತೆ. ಈ ಸಮುದ್ರ ಯಾವುದೇ ನೀರು ಹರಿದು ಬಂದರೂ ಸ್ವೀಕಾರ ಮಾಡುತ್ತದೆ," ಎಂದು ತಿಳಿಸಿದರು.
"ಕರ್ನಾಟಕ ರಾಜ್ಯ ಚುನಾವಣೆ ಹತ್ರ ಬರ್ತಾ ಇದೆ. ರಾಜ್ಯದ ಯಾವುದೇ ಕಲಾವಿದರು, ಮುಖಂಡರು ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವವರನ್ನು ಬಿ.ಜೆ ಪಿ ಸ್ವಾಗತಿಸುತ್ತದೆ. ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಪಕ್ಷವನ್ನು ಮುಂದುವರಿಸುತ್ತಾರೋ ಅಥವಾ ಬಿ.ಜೆ.ಪಿ ಜೊತೆ ಮರ್ಜ್ ಮಾಡುತ್ತಾರೋ," ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರ, ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರ ಬರುತ್ತಿದೆ ಎಂಬ ಗೃಹ ಸಚಿವರ ಹೇಳಿಕೆ ಕುರಿತು ಮಾತನಾಡಿದ ಶೋಭಾ ಕರದ್ಲಾಜೆ, "ರಾಮಲಿಂಗಾ ರೆಡ್ಡಿ ಗೃಹ ಸಚಿವರು. ಗೃಹ ಸಚಿವರಾಗಿ ರಾಮಲಿಂಗ ರೆಡ್ಡಿ ಕಡ್ಲೆಪುರಿ ತಿನ್ತಿದ್ದಾರಾ?" ಎಂದು ಆಕ್ರೋಶ ವ್ಯಕ್ತ ಪಡಿಸಿದರು.
"ಯಾವುದೇ ರಾಜ್ಯದಿಂದ ಶಸ್ತ್ರಾಸ್ತ್ರ ಬರ್ತಾ ಇದ್ರೆ, ಕ್ರಿಮಿನಲ್ಸ್ ಬರ್ತಾ ಇದ್ರೆ ಅದನ್ನು ಗೃಹಸಚಿವರು ಗೃಹ ಇಲಾಖೆ ಮೂಲಕ ತಡೆಯಬೇಕು. ಅದನ್ನು ಬಿಟ್ಟು ಗೃಹ ಸಚಿವರು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಜನಗಳನ್ನು, ಹಿಂದೂ ಯುವಕರನ್ನು ರಕ್ಷಣೆ ಮಾಡಲಿ. ಇದು ಸಾಧ್ಯವಿಲ್ಲದೆ ಇದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications