ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಸಾಕ್ಷಿಗಳ ವಿಚಾರಣೆ ಆರಂಭ
ಉಡುಪಿ, ಜುಲೈ 03 : ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ಉಡುಪಿ ನ್ಯಾಯಾಲಯದಲ್ಲಿ ಆರಂಭವಾಗಿದೆ. 2016ರ ಜುಲೈನಲ್ಲಿ ಭಾಸ್ಕರ ಶೆಟ್ಟಿ ನಾಪತ್ತೆಯಾಗಿದ್ದರು. ಆಗಸ್ಟ್‌ನಲ್ಲಿ ಅವರು ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.
ಸುಪ್ರೀಂಕೋರ್ಟ್ ಸೂಚನೆಯಂತೆ ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಾಕ್ಷಿಗಳ ವಿಚಾರಣೆಯನ್ನು ಆರಂಭಿಸಿದೆ. ಭಾಸ್ಕರ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲು ಮಾಡಿದ್ದಾರೆ.
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ, ಜ್ಯೋತಿಷಿ ನಿರಂಜನ್ ಭಟ್ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಬಳಿಕ ಸಿಐಡಿಗೆ ಪ್ರಕರಣ ಹಸ್ತಾಂತರವಾಗಿತ್ತು.
ಪ್ರಕರಣದಲ್ಲಿ ಜಾಮೀನು ಪಡೆಯಲು ಆರೋಪಿಗಳು ಹೈಕೋರ್ಟ್, ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿರುವುದರಿಂದ ಸಾಕ್ಷಿಗಳ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಉಡುಪಿ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

ಸಿಐಡಿ ಪೊಲೀಸರಿಂದ ಚಾರ್ಜ್ ಶೀಟ್
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಪೊಲೀಸರು ಮೊದಲು 816 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಬಳಿಕ 101 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಭಾಸ್ಕರ ಶೆಟ್ಟಿ ಅವರ ಮನೆಯಲ್ಲಿ ಸಿಕ್ಕ ರಕ್ತದ ಕಲೆ, ಮೂಳೆಗಳ ಮಾದರಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮುಂತಾದವುಗಳನ್ನು ಸೇರಿಸಿ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಈಗ ಉಡುಪಿ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭವಾಗಿದೆ.

ಎರಡು ವರ್ಷದ ಹಿಂದಿನ ಪ್ರಕರಣ
ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷಗಳಿಂದ ತನಿಖೆ, ವಿಚಾರಣೆ ನಡೆಯುತ್ತಿದೆ. 2016ರ ಜುಲೈ 28ರಂದು ಭಾಸ್ಕರ ಶೆಟ್ಟಿ ಉಡುಪಿಯ ನಿವಾಸದಿಂದ ನಾಪತ್ತೆಯಾಗಿದ್ದರು. 2016ರ ಆಗಸ್ಟ್ 6ರಂದು ಅವರು ಹತ್ಯೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.
ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಕುಟುಂಬ ಸದಸ್ಯರೇ ಆರೋಪಿಗಳಾಗಿದ್ದಾರೆ. ಮೊದಲು ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದರು. ಬಳಿಕ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಪತ್ನಿ, ಪುತ್ರ ಆರೋಪಿಗಳು
ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಅವರು ಮೊದಲ ಆರೋಪಿ. ಪುತ್ರ ನವನೀತ್ ಶೆಟ್ಟಿ 2ನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಜ್ಯೋತಿಷಿ ನಿರಂಜನ್ ಅವರು 3ನೇ ಆರೋಪಿಯಾಗಿದ್ದಾರೆ.
ಉಡುಪಿಯ ನಿವಾಸದಲ್ಲಿ ಭಾಸ್ಕರ ಶೆಟ್ಟಿ ಅವರನ್ನು ಹತ್ಯೆ ಮಾಡಿ, ಶವವನ್ನು ಕಾರಿನಲ್ಲಿ ಸಾಗಿಸಿ, ನಿರಂಜನ್ ಸಹಾಯದಿಂದ ಹೋಮಕುಂಡದಲ್ಲಿ ಶವವನ್ನು ಸುಟ್ಟು ಮೂಳೆಗಳನ್ನು ನದಿಗೆ ಎಸೆಯಲಾಗಿದೆ ಎಂಬುದು ಆರೋಪವಾಗಿದೆ.

ಆರೋಪಿಗಳಿಗೆ ಇಲ್ಲ ಜಾಮೀನು
ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಜಾಮೀನು ಪಡೆಯಲು ಭಾರೀ ಪ್ರಯತ್ನ ನಡೆಸಿದರು. ಉಡುಪಿ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಬಳಿಕ ಎಲ್ಲರೂ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ಸಹ ಜಾಮೀನು ನೀಡಲು ನಿರಾಕರಿಸಿದ್ದರಿಂದ ಎಲ್ಲರೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದು, ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭಿಸುವಂತೆ ಉಡುಪಿ ಕೋರ್ಟ್‌ಗೆ ಸೂಚನೆ ನೀಡಿದೆ.












Click it and Unblock the Notifications