ಅಯೋಧ್ಯೆ ತೀರ್ಪು: ಉಪವಾಸ ಕೂರುವೆ, ಪೇಜಾವರ ಶ್ರೀಗಳ ಎಚ್ಚರಿಕೆ
ಉಡುಪಿ, ನ 8: "ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಲಿರುವ ಐತಿಹಾಸಿಕ ತೀರ್ಪಿಗೆ ಹಿಂದೂ ಮತ್ತು ಮುಸ್ಲಿಮರು ಬದ್ದರಾಗಿರಬೇಕೆಂದು" ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮನವಿ ಮಾಡಿದ್ದಾರೆ.
"ತೀರ್ಪು ಹಿಂದೂಗಳ ಪರವಾಗಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಸಾರ್ವಜನಿಕವಾಗಿ ವಿಜಯೋತ್ಸವ/ಪ್ರತಿಭಟನೆ ನಡೆಸಿ ಶಾಂತಿಗೆ ಭಂಗ ತಂದರೆ ಉಪವಾಸ ಕೂರುವುದಾಗಿ" ಪೇಜಾವರ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
"ದೇಶದ ಏಕತೆಯನ್ನು ಎತ್ತಿಹಿಡಿಯಬೇಕಾದಂತಹ ಸಂದರ್ಭವಿದು. ಸಂವಿಧಾನದ ನಿರ್ಧಾರಕ್ಕೆ ನಾವು ಬದ್ದರಾಗಿರಬೇಕು. ಇದು ವಿಶ್ವಹಿಂದೂ ಪರಿಷತ್ ನಿಲುವು ಕೂಡಾ" ಎಂದು ಶ್ರೀಗಳು ಹೇಳಿದ್ದಾರೆ.

"ತೀರ್ಪು ಹಿಂದೂಗಳ ಪರವಾಗಿ ಬಂದು ಅದಕ್ಕೆ ಸಂಭ್ರಮಿಸಬೇಕು ಎಂದಿದ್ದರೆ, ದೇವಸ್ಥಾನ, ಮಠಗಳಿಗೆ ಬಂದು ಭಜನೆ, ಪೂಜೆ ಸಲ್ಲಿಸಿ" ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
"ತೀರ್ಪು ಒಂದು ವೇಳೆ ಮುಸ್ಲಿಮರ ಪರವಾಗಿ ಬಂದರೂ, ಯಾರೂ ಪ್ರತಿಭಟನೆ ನಡೆಸಬಾರದು. ದೇಶದಲ್ಲಿ ಎಲ್ಲೂ ಹಿಂಸಾಚಾರ ನಡೆಯಬಾರದು" ಎಂದು ಪೇಜಾವರ ಶ್ರೀಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ವಿಚಾರದ ಬಗ್ಗೆ ಮಾತನಾಡುತ್ತಾ, "ಟಿಪ್ಪು ಸಾವಿರಾರು ಜನರನ್ನು ಹತ್ಯೆ ಮಾಡಿದ್ದ ಎಂದು ಒಂದು ಇತಿಹಾಸ ಹೇಳುತ್ತದೆ. ಜೊತೆಗೆ, ಆತನೊಬ್ಬ ಉತ್ತಮ ಆಡಳಿತಗಾರನಾಗಿದ್ದ ಎಂದೂ ಹೇಳುತ್ತೆ. ಹಾಗಾಗಿ, ಆತನ ನಿಜವಾದ ಮುಖದ ಪರಿಚಯವಾಗಬೇಕು" ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.












Click it and Unblock the Notifications