ಉಡುಪಿ; ಅರಶಿನ ಗುಂಡಿ ಜಲಪಾತಕ್ಕೆ ಬಿದ್ದಿದ್ದ ಶರತ್ ಶವ ಪತ್ತೆ
ಉಡುಪಿ, ಜುಲೈ 30; ಹಲವಾರು ದಿನಗಳ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ. ಉಡುಪಿ ಜಿಲ್ಲೆಯ ಕೊಲ್ಲೂರು ಗ್ರಾಮದ ಅರಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭ ಆಯತಪ್ಪಿ ಬಿದ್ದಿದ್ದ ಯುವಕ ಶರತ್ ಮೃತಪಟ್ಟಿದ್ದು, ಭಾನುವಾರ ಶವ ಪತ್ತೆಯಾಗಿದೆ.
ಜುಲೈ 23ರಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಸುಣ್ಣದ ಹಳ್ಳಿ ಕೆ. ಹೆಚ್. ನಗರ ನಿವಾಸಿ ಶರತ್ (23) ಎಂಬ ಯುವಕ ಅರಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭ ಆಯತಪ್ಪಿ ಬಂಡೆಯ ಮೇಲಿಂದ ಬಿದ್ದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅರಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭ ಆಯತಪ್ಪಿ ಬಿದ್ದಿದ್ದ ಶರತ್ ಸೌಪರ್ಣಿಕ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ. ಅವನು ಬದುಕಿ ಬರಲಿ ಎಂದು ಕುಟುಂಬದವರು ಪ್ರಾರ್ಥಿಸುತ್ತಿದ್ದರು. ಶರತ್‌ಗಾಗಿ ಮಳೆಯ ನಡುವೆಯೇ ಹುಡುಕಾಟ ನಡೆದಿತ್ತು.
200 ಮೀಟರ್ ಕೆಳಗೆ ಶವ ಪತ್ತೆ; ಪೊಲೀಸರು, ಸ್ಥಳೀಯರು ಮತ್ತು ಚಿತ್ರದುರ್ಗದ ಜ್ಯೋತಿರಾಜ್ ಅವರ ತಂಡ ಸಹ ಶರತ್‌ಗಾಗಿ ಹುಡುಕಾಟ ನಡೆಸುತ್ತಲೇ ಇತ್ತು. ಆದರೆ ಯಾವುದೇ ಸುಳಿವು ಸಿಗದಿರುವುದು ನಿರಾಶೆ ಮೂಡಿಸಿತ್ತು.
ಮಂಗಳೂರಿನ ಎಸ್‌ಡಿಆರ್‌ಎಫ್‌ನ 10 ಮಂದಿಯ ತಂಡ, ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿ, ಬೈಂದೂರು ಅಗ್ನಿಶಾಮಕ ದಳದ ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ, ಜ್ಯೋತಿರಾಜ್ ತಂಡ ಶರತ್‌ಗಾಗಿ ಹುಡುಕಾಟ ನಡೆಸಿತ್ತು. ಅಂತಿಮವಾಗಿ ಶವ ಪತ್ತೆಯಾಗಿದ್ದು, ಬಂಡೆಗಳ ನಡುವಿನಿಂದ ಮೇಲಕ್ಕೆ ಎತ್ತಲಾಗಿದೆ.
ಅರಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭ ಶರತ್ ಆಯತಪ್ಪಿ ಬೀಳುವ ದೃಶ್ಯ ಸ್ನೇಹಿತರ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಭಾರೀ ಮಳೆ ಸುರಿಯುತ್ತಿದ್ದ ಕಾರಣ ಜಲಪಾತವೂ ಮೈದುಂಬಿ ಹರಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಶರತ್ ಆಯತಪ್ಪಿ ಬಿದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಲ್ಲರೂ ಶರತ್ ಬದುಕಿ ಬರಲಿ ಎಂದು ಹಾರೈಸಿದ್ದರು.
ಉಡುಪಿ ಜಿಲ್ಲಾಡಳಿತದ ಪ್ರಕಟಣೆ; ಶರತ್ ಆಯತಪ್ಪಿ ಬಿದ್ದ ಬಳಿಕ ಉಡುಪಿ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿತ್ತು. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಸುಣ್ಣದ ಹಳ್ಳಿ ಕೆ. ಹೆಚ್. ನಗರ ನಿವಾಸಿ ಶರತ್ (23) ಎಂಬ ಯುವಕನು ಜುಲೈ 23 ರಂದು ಕೊಲ್ಲೂರು ಗ್ರಾಮದ ಅರಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭ ಆಯತಪ್ಪಿ ಬಂಡೆಯ ಮೇಲಿನಿಂದ ಕಾಲು ಜಾರಿ ಬಿದ್ದು, ಸೌಪರ್ಣಿಕ ನದಿಯ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುತ್ತಾರೆ ಎಂದು ಹೇಳಿತ್ತು.
5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸದೃಢ ಶರೀರ ಹೊಂದಿದ್ದು, ಕನ್ನಡ ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿತ್ತು.
ಈ ಘಟನೆ ಬಳಿಕ ಉಡುಪಿ ಜಿಲ್ಲಾಡಳಿತ ಪ್ರವಾಸಿಗರಿಗೆ ಸೂಚನೆಯೊಂದನ್ನು ನೀಡಿತ್ತು. ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನದಿಗಳು, ಹಳ್ಳಗಳು, ತೋಡುಗಳು ತುಂಬಿ ಹರಿಯುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಯುವಜನರು, ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಬೀಚ್‌ಗಳು, ನದಿಗಳು ಹಾಗೂ ಜಲಪಾತಗಳ ಬಳಿ ತೆರಳದಂತೆ ಹಾಗೂ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದರು.












Click it and Unblock the Notifications