Breaking; ಉಡುಪಿಯಲ್ಲಿ ಹಿಜಾಬ್‌ಗೆ ಪಟ್ಟು, ಪರೀಕ್ಷೆ ಬರೆಯದ ಆಲಿಯಾ, ರೇಷಂ
ಉಡುಪಿ, ಏಪ್ರಿಲ್ 22; ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್‌ಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಪರೀಕ್ಷೆ ಬರೆಯದೇ ವಾಪಸ್ ಆದ ಘಟನೆ ಉಡುಪಿಯಲ್ಲಿ ನಡೆದಿದೆ. ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ, ರೇಷಂ ಮನೆಗೆ ವಾಪಸ್ ಆಗಿದ್ದಾರೆ.
ಶುಕ್ರವಾರ ಉಡುಪಿಯ ವಿದ್ಯೋದಯ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಆಲಿಯಾ ಅಸಾದಿ ಮತ್ತು ರೇಷಂ ಆಗಮಿಸಿದ್ದರು. ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪಡೆದಿದ್ದ ಅವರು ಪ್ರಾಂಶುಪಾಲರನ್ನು ಭೇಟಿಯಾಗಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ತಹಶೀಲ್ದಾರ್ ಸರ್ಕಾರದ ಆದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ವಿದ್ಯಾರ್ಥಿಗಳು ತಮ್ಮಪಟ್ಟು ಸಡಿಲಿಸಲಿಲ್ಲ.

ಈ ಹಿನ್ನಲೆಯಲ್ಲಿ ವಿದ್ಯೋದಯ ಕಾಲೇಜಿನಿಂದ ಆಲಿಯಾ ಅಸಾದಿ ಮತ್ತು ರೇಷಂ ಆಟೋದಲ್ಲಿ ಮನೆಗೆ ವಾಪಸ್ ಆದರು. ವಿದ್ಯಾರ್ಥಿನಿಯರ ಪೋಷಕರು ಸಹ ಪರೀಕ್ಷಾ ಕೇಂದ್ರದ ಸಮೀಪಕ್ಕೆ ಆಗಮಿಸಿದ್ದರು. ಆದರೆ ನಿಷೇಧಾಜ್ಞೆ ಇರುವ ಕಾರಣ ಕಾಲೇಜಿಗೆ ಆಗಮಿಸಲು ಸಾಧ್ಯವಾಗಲಿಲ್ಲ.
ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಆಲಿಯಾ ಅಸಾದಿ, ರೇಷಂ ಹಿಜಾಬ್ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ಮೊರೆ ಸಹ ಹೋಗಿದ್ದರು.
ಶುಕ್ರವಾರ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಜೊತೆ ಗಟ್ಟಿ ಸ್ವರದಲ್ಲಿ ವಾಗ್ವಾದ ಮಾಡಿದ ಕಾರಣ ಪರೀಕ್ಷಾ ಕೇಂದ್ರಕ್ಕೆ ತಹಶಿಲ್ದಾರ್ ಅರ್ಚನಾ ಭಟ್, ಉಡುಪಿ ನಗರ ಠಾಣಾ ಪೊಲೀಸರು ಆಗಮಿಸಿ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದರು.
ಈ ವೇಳೆಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷಾ ಕೊಠಡಿಯೊಳಗೆ ತೆರಳಿ ಪರೀಕ್ಷೆ ಬರೆಯೋದಾಗಿ ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.












Click it and Unblock the Notifications