ಖಾಸಗಿ ಬಸ್ ಪಲ್ಟಿ: ಮೃತರ ಕುಟುಂಬಸ್ಥರು, ಗಾಯಾಳುಗಳಿಗೆ ಪರಿಹಾರ: ಸಾರಿಗೆ ಸಚಿವ
ತುಮಕೂರು, ಮಾರ್ಚ್ 19: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆಯ ಕೆರೆ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತವಾಗಿದ್ದು, ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಾರಿಗೆ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ
ಖಾಸಗಿ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಸ್ ಫಿಟ್‌ನೆಟ್ ಸೇರಿದಂತೆ ಎಲ್ಲ ದಾಖಲೆಗಳ ಪರಿಶೀಲಿಸಲಾಗುತ್ತದೆ. ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥರು, ಗಾಯಾಳುಗಳಿಗೆ ಆರ್ಥಿಕ ಸಹಾಯ ಮಾಡುತ್ತೇವೆ. RTO ಅಧಿಕಾರಿಗಳ ತಪ್ಪಿದ್ದರೂ ಕೂಡಲೇ ಕ್ರಮಕೈಗೊಳ್ಳುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಗ್ರಾಮದಲ್ಲಿ ನಡೆದ ಭೀಕರ ಬಸ್ ಅಪಘಾತದ ಸುದ್ದಿ ತಿಳಿದು ಆಘಾತವಾಗಿದೆ. ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ಮರಣ ಹೊಂದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿ, ಎಸ್‌ಪಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಲು ಸೂಚಿಸಿದ್ದೇನೆ. ಚಿಕಿತ್ಸೆಗೆ ಕೂಡಲೇ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಇದೆ. ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ. ಪ್ರಾಣ ಹಾನಿಯಾಗದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಖಾಸಗಿ ಬಸ್ ಮಾಹಿತಿ ಪಡೆಯುವಂತೆಯೂ ಸೂಚಿಸಿದ್ದೇನೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ರಕ್ಷಣಾ ಸಿಬ್ಬಂದಿ, ದುರಂತ ಸ್ಥಳಕ್ಕೆ ತಕ್ಷಣ ಧಾವಿಸಿ ಎಲ್ಲಾ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರಕಿಸಲು ನಿರ್ದೇಶಿಸಿದ್ದೇನೆ. ಜಿಲ್ಲಾ ಎಸ್ಪಿ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಜವಾಬ್ದಾರಿ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಅಪಘಾತವಾದ ಖಾಸಗಿ ಬಸ್‌ನ ಎಲ್ಲಾ ದಾಖಲೆಗಳು ಸರಿಯಾಗಿವೆ
ಪಲ್ಟಿಯಾದ ಖಾಸಗಿ ಬಸ್‌ನ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ಹೇಳಿದ್ದಾರೆ. ಪಲ್ಟಿಯಾದ ಖಾಸಗಿ ಬಸ್‌ನಲ್ಲಿ ಓವರ್ ಲೋಡ್ ಮಾಡಿದ್ದರು. ಅತಿ ವೇಗವಾಗಿ ಬಸ್ ಚಾಲನೆಯಿಂದ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಆಗಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ಬಳಿಕ ಎಲ್ಲ ಮಾಹಿತಿ ಸಿಗಲಿದೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ತಿಳಿಸಿದ್ದಾರೆ.












Click it and Unblock the Notifications