Copra Price: ನಾಫೆಡ್ ಕೇಂದ್ರಗಳ ಮೂಲಕ ಕೊಬ್ಬರಿ ಖರೀದಿ ವಿಳಂಬ: ತೆಂಗು ಬೆಳೆಗಾರರ ಆಕ್ರೋಶ
ನಾಫೆಡ್ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡದೆ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮಕ್ಕೆ ತೆಂಗು ಬೆಳೆಗಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಬ್ಬರಿ ಖರೀದಿ ಮಾಡದೆ ಬೆಳೆಗಾರರನ್ನು ನಿರ್ಲಕ್ಷಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 1ರಿಂದ ತುಮಕೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ನಾಫೆಡ್ ಖರೀದಿ ಕೇಂದ್ರಗಳನ್ನು ತೆರೆದು ಕೊಬ್ಬರಿ ಖರೀದಿ ಮಾಡಬೇಕಿತ್ತು. ಜನವರಿ 20ರಿಂದ ಖರೀದಿ ಕೇಂದ್ರ ಆರಂಭವಾಗಬೇಕಿತ್ತಾದರೂ, ಅದನ್ನು ಫೆಬ್ರವರಿ 1ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೆ ಮುಂದೂಡಿದ್ದು ತೆಂಗು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಅನಿರ್ದಿಷ್ಟಾವಧಿಗೆ ನಾಫೆಡ್ ಕೇಂದ್ರಗಳ ಮೂಲಕ ಕೊಬ್ಬರಿ ಖರೀದಿಯನ್ನು ಮುಂದೂಡಿದ್ದು, ಇದಕ್ಕೆ ನಿರ್ದಿಷ್ಟ ಕಾರಣವನ್ನು ರಾಜ್ಯ ಸಹಕಾರ ಮಾರಾಟ ಮಂಡಳ ಹೇಳಿಲ್ಲ, ಇದು ತೆಂಗು ಬೆಳೆಗಾರರನ್ನು ಮತ್ತಷ್ಟು ಕೆರಳಿಸಿದೆ.
ನಾಫೆಟ್ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳು, ವರ್ತಕರ ಹಾವಳಿ ತಪ್ಪಿಸಲು ತೆಂಗು ಬೆಳೆಗಾರರಿಂದ ಬಯೋ ಮೆಟ್ರಿಕ್ ಪಡೆದು ಕೊಬ್ಬರಿ ಖರೀದಿಗೆ ನಿರ್ಧಾರ ಮಾಡಲಾಗಿತ್ತು. ಇದಕ್ಕಾಗಿ ತಂತ್ರಾಂಶ ಅಭಿವೃದ್ಧಿ ಮಾಡಲಾಗುತ್ತಿದ್ದು ಇನ್ನೂ ಕೂಡ ಅದು ಪೂರ್ತಿಯಾಗದ ಕಾರಣ ಕೊಬ್ಬರಿ ಖರೀದಿ ಮುಂದೂಡಲಾಗಿದೆ ಎನ್ನಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತುಮಕೂರಿನಲ್ಲಿ ಜ.24ರಂದು ಎಪಿಎಂಸಿ ಪ್ರಾಂಗಣದಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ ಮಾಡಿದ್ದರು. ಫೆಬ್ರವರಿ 1ರಿಂದ ಕೊಬ್ಬರಿ ಖರೀದಿ ಕೇಂದ್ರ ಆರಂಭವಾಗಲಿದ್ದು, ಮುಂದೂಡುವುದಿಲ್ಲ ಎಂದು ಕೃಷಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದರೂ ಇನ್ನೂ ಕೊಬ್ಬರಿ ಖರೀದಿ ಪ್ರಕ್ರಿಯೆ ಶುರುವಾಗಿಲ್ಲ.
ಬಯೋ ಮೆಟ್ರಿಕ್ ಮೂಲಕವೇ ಕೊಬ್ಬರಿ ಖರೀದಿ ಮಾಡಬೇಕು. ತಕ್ಷಣವೇ ಖರೀದಿ ಪ್ರಕ್ರಿಯೆ ಶುರುಮಾಡಬೇಕು ಎಂದು ತೆಂಗು ಬೆಳೆಗಾರರು ಆಗ್ರಹಿಸಿದ್ದಾರೆ. ಸರ್ಕಾರಗಳು ರೈತರ ಭಾವನೆಗಳ ಜೊತೆ ಚಲ್ಲಾಟ ಆಡುವುದನ್ನು ನಿಲ್ಲಿಸಬೇಕು. ವಿಳಂಬ ನೀತಿಯನ್ನು ಬಿಟ್ಟು ತಕ್ಷಣವೇ ಕೊಬ್ಬರಿ ಖರೀದಿ ಮಾಡಿ, ರೈತರ ಸಮಸ್ಯೆಗೆ ಸ್ಪಂದಿಸಲಿ ಎಂದು ಆಗ್ರಹಿಸಿದ್ದಾರೆ.
ವಿಳಂಬ ನೀತಿ ಅನುಸರಿಸಿ ನಂತರ ಕೊನೆಯಲ್ಲಿ ಬಯೋ ಮೆಟ್ರಿಕ್ ಇಲ್ಲದೆ ಕೊಬ್ಬರಿ ಖರೀದಿ ಮಾಡುವ ಮೂಲಕ ಅಧಿಕಾರಿಗಳು ಮಧ್ಯವರ್ತಿಗಳು, ಮಾರಾಟಗಾರರಿಗೆ ಅನುಕೂಲ ಮಾಡಲು ಈ ಸಂಚು ಮಾಡಲಾಗಿದೆ ಎನ್ನುವ ಆರೋಪಗಳನ್ನು ತೆಂಗು ಬೆಳೆಗಾರರು ಮಾಡಿದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆಯಾದರೂ ಅದನ್ನು ಖರೀದಿ ಮಾಡದೆ ಸರ್ಕಾರಗಳು ನಿರ್ಲಕ್ಷ್ಯ ತೋರಿರುವುದು ದುರಂತವೇ ಸರಿ.












Click it and Unblock the Notifications