Tumkur: ತುಮಕೂರು ಮಹಾನಗರ ಪಾಲಿಕೆ ವಿಸ್ತರಣೆ, ವಾರ್ಡ್‌ಗಳ ಸಂಖ್ಯೆ ಹೆಚ್ಚಳ: ವರದಿ
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ. ಗುಬ್ಬಿ ರಸ್ತೆಯಲ್ಲಿರುವ ಮಲ್ಲಸಂದ್ರದವರೆಗೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಯಾಗಲಿದೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡಲು, ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲು ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಕೂಡ ಹಲವು ಹಳ್ಳಿಗಳನ್ನು ಸೇರಿಸಿ ಬೆಂಗಳೂರು ನಗರದ ವ್ಯಾಪ್ತಿಯನ್ನು ವಿಸ್ತರಣೆ ಮಾಡಿದ್ದೆ. ತುಮಕೂರು ನಗರ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ವ್ಯಾಪ್ತಿ ವಿಸ್ತರಣೆ ಮಾಡುವ ಅಗತ್ಯ ಇದೆ. ಈಗ ಗುಬ್ಬಿ ರಸ್ತೆಯಲ್ಲಿ ಭೀಮಸಂದ್ರದವರೆಗೆ ಪಾಲಿಕೆ ವ್ಯಾಪ್ತಿಯಿದ್ದು ಅದನ್ನು ಮಲ್ಲಸಂದ್ರದವರೆಗೆ ವಿಸ್ತರಣೆ ಮಾಡಲಾಗುತ್ತದೆ. ಇದರಿಂದ ನಗರದ ಬೆಳವಣಿಗೆಗೆ ಸಹಕಾರಿಯಾಗುವ ಜೊತೆಗೆ ತೆರಿಗೆ ಸಂಗ್ರಹ ಹೆಚ್ಚಲಿದ್ದು, ಪಾಲಿಕೆ ಆದಾಯವೂ ಹೆಚ್ಚಾಗುತ್ತದೆ. ಬಿಬಿಎಂಪಿ ಮಾದರಿಯಲ್ಲಿ ವಾರ್ಡ್ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿವೆ, ಮಲ್ಲಸಂದ್ರದವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಯಾದ ಬಳಿಕ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ರಾಹುಲ್ ಗಾಂಧಿ ಸ್ಪರ್ಧೆ ಬಗ್ಗೆ ಹೇಳಿದ್ದೇನು?
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್, ರಾಹುಲ್ ಗಾಂಧಿ ಇಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎಂದರೆ ಯಾರು ಬೇಡ ಅನ್ನುತ್ತಾರೆ. ಅವರು ಸ್ಪರ್ಧಿಸುತ್ತೇನೆ ಎಂದರೆ ನಾವು ಸ್ವಾಗತಿಸುತ್ತೇವೆ, ಈ ವಿಚಾರ ನನಗೆ ಹೆಚ್ಚು ಗೊತ್ತಿಲ್ಲ, ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೆ ಗೊತ್ತಿರಬಹುದು ಎಂದರು.
ಸ್ಮಾರ್ಟ್ ಸಿಟಿ ಯೋಜನೆ
ದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಯಾಗುತ್ತಿರುವ ನಗರಗಳಲ್ಲಿ ತುಮಕೂರು ಕೂಡ ಒಂದಾಗಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ನಗರದಲ್ಲಿ ನಡೆಯುತ್ತಿವೆ. ಪಾಲಿಕೆ ವ್ಯಾಪ್ತಿ ವಿಸ್ತರಣೆಯಾದರೆ, ಅಕ್ಕ ಪಕ್ಕದ ಹಳ್ಳಿಗಳು ಕೂಡ ವೇಗವಾಗಿ ಪ್ರಗತಿ ಕಾಣಲಿವೆ.
ವಸಂತ ನರಸಾಪುರ ಕೈಗಾರಿಕ ಪ್ರದೇಶ ಸ್ಥಾಪನೆಯಾದ ಬಳಿಕ ತುಮಕೂರು ನಗರದ ಬೆಳವಣಿಗೆ ವೇಗ ಪಡೆದುಕೊಂಡಿದೆ. ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ನಗರ ಅಭಿವೃದ್ಧಿ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬೆಂಗಳೂರು - ತುಮಕೂರು ನಡುವೆ ಎಕ್ಸ್‌ಪ್ರೆಸ್‌ವೇ ಕೆಲಸ ನಡೆಯುತ್ತಿದ್ದು, 2026ರ ವೇಳೆಗೆ ಪೂರ್ಣವಾಗಲಿದೆ. ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಬಳಿಕ ತುಮಕೂರು - ಬೆಂಗಳೂರು ನಡುವಿನ ಸಾರಿಗೆ ಮತ್ತಷ್ಟು ಸುಧಾರಿಸಲಿದ್ದು, ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ.












Click it and Unblock the Notifications