Tumkur: ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸೊಗಡು ಶಿವಣ್ಣ ಅಡ್ಡಿ? ಬಂಡಾಯದ ಲಾಭ ಪಡೆಯುತ್ತಾ ಜೆಡಿಎಸ್?
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ 5,293 ಮತಗಳಿಂದ ಗೆಲುವು ಕಂಡಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷಗಳ ನಡುವೆ ನೇರ ಹಣಾಹಣಿ ನಡೆದಿತ್ತು. ಈ ಬಾರಿ ಬಿಜೆಪಿ ಗೆಲುವಿಗೆ ಸೊಗಡು ಶಿವಣ್ಣ ಅಡ್ಡಿಯಾಗಿದ್ದಾರೆ.
ಕಾಂಗ್ರೆಸ್ ಈ ಬಾರಿ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಅವರಿಗೆ ಟಿಕೆಟ್ ತಪ್ಪಿಸಿದ್ದು, ಇಕ್ಬಾಲ್ ಅಹಮದ್ ಎನ್ನುವರರಿಗೆ ಟಿಕೆಟ್ ನೀಡಿದೆ. ಈ ಮೂಲಕ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಕಡಿಮೆಯಾಗಿದೆ. 16 ಬಾರಿ ಇಲ್ಲಿ ಚುನಾವಣೆ ನಡೆದಿದ್ದು, 7 ಬಾರಿ ಕಾಂಗ್ರೆಸ್ ಗೆಲುವು ಕಂಡಿದ್ದರೆ, ಪಿಎಸ್‌ಪಿ ಮತ್ತು ಜೆಎನ್‌ಪಿ ಅಭ್ಯರ್ಥಿಗಳು ತಲಾ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಇಲ್ಲಿ 7 ಬಾರಿ ಗೆಲುವು ಕಂಡಿದೆ.

ಸೊಗಡು ಶಿವಣ್ಣ ಇಲ್ಲಿ ಸತತವಾಗಿ 4 ಬಾರಿ ಆಯ್ಕೆಯಾದು ದಾಖಲೆ ಬರೆದರು. 1994, 1999, 2004 ಮತ್ತು 2008ರಲ್ಲಿ ಗೆಲುವು ಕಂಡರು, ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ. ಆದರೆ, 2013ರಲ್ಲಿ ಸೊಗಡು ಶಿವಣ್ಣ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹಮದ್ ವಿರುದ್ಧ ಸೋಲುಕಂಡರು. 2018ರಲ್ಲಿ ಮತ್ತೆ ಚುನಾವಣೆಗೆ ನಿಲ್ಲಲು ಬಯಸಿದ್ದ ಸೊಗಡು ಶಿವಣ್ಣಗೆ ಬಿಜೆಪಿ ಟಿಕೆಟ್ ನಿರಾಕರಿಸಿತು, ಬಿಎಸ್‌ವೈ ಆಪ್ತರಾದ ಜ್ಯೋತಿ ಗಣೇಶ್‌ಗೆ ಟಿಕೆಟ್ ನೀಡಿದರು.
2018ರಲ್ಲಿ ಟಿಕೆಟ್ ಕೈತಪ್ಪಿದಾಗಲೇ ಸೊಗಡು ಶಿವಣ್ಣ ಬಂಡಾಯವೆದ್ದಿದ್ದರು, ಆದರೂ ಬಿಜೆಪಿ ನಾಯಕರು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಮತ್ತೆ ಟಿಕೆಟ್ ಕೈತಪ್ಪಿದ್ದು, ಸೊಡಗು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.
ಲಿಂಗಾಯತ ಮತಗಳ ವಿಭಜನೆ?
ಸೊಗಡು ಶಿವಣ್ಣ ಪಕ್ಷೇತರರಾಗಿ ನಿಂತಿರುವುದು ಬಿಜೆಪಿ ದೊಡ್ಡ ಹೊಡೆತ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಲಿಂಗಾಯತ ಮತಗಳನ್ನು ಸೆಳೆಯುವಲ್ಲಿ ಸೊಗಡು ಶಿವಣ್ಣ ಯಶಸ್ವಿಯಾದರೆ, ಅದು ಜೆಡಿಎಸ್‌ಗೆ ಲಾಭವಾಗಲಿದೆ.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು 5,293 ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಮತ್ತೊಮ್ಮೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಕೂಡ ಹೊಸ ಅಭ್ಯರ್ಥಿಗೆ ಅವಕಾಶ ನೀಡಿದ್ದು, ಕಾಂಗ್ರೆಸ್‌ನ ಮತಗಳು ಕೂಡ ಜೆಡಿಎಸ್‌ಗೆ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಿಜೆಪಿಗೆ ಆಡಳಿತ ವಿರೋಧ ಅಲೆ ಆತಂಕ
ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದ ಬಿಜೆಪಿಗೆ ಒಂದು ಕಡೆ ಆಡಳಿತ ವಿರೋಧಿ ಅಲೆ ಆತಂಕ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ಸಮಾವೇಶ ನಡೆಸಿದ್ದು, ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದರೂ, ಅದರಿಂದ ಹೆಚ್ಚಿನ ಲಾಭವಾಗಲ್ಲ ಎನ್ನಲಾಗಿದೆ.
ಮಾಜಿ ಶಾಸಕ ಸೊಗಡು ಶಿವಣ್ಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಜನರ ಜೊತೆ ಬೆರೆಯುವ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ.
ತುಮಕೂರು ನಗರ ಮತದಾರರ ವಿವರ
ತುಮಕೂರು ನಗರದಲ್ಲಿ ಒಟ್ಟು ಮತದಾರರ ಸಂಖ್ಯೆ 258875 ಇದೆ. 131848 ಮಹಿಳಾ ಮತದಾರರು ಇದ್ದು, 127001 ಪುರುಷ ಮತದಾರರು ಇದ್ದಾರೆ. ಒಕ್ಕಲಿಗರು, ಲಿಂಗಾಯತರು, ದಲಿತರು ಹಾಗೂ ಮುಸ್ಲಿಂ ಮತದಾರರು ಹೆಚ್ಚಾಗಿದ್ದು, ಹಿಂದುಳಿದ ವರ್ಗದ ಗೊಲ್ಲರು, ಕುರುಬರು ಹಾಗೂ ಇತರೆ ಸಮುದಾಯದ ಮತದಾರರು ಕೂಡ ಅಭ್ಯರ್ಥಿಯ ಫಲಿತಾಂಶವನ್ನು ಬದಲಾಯಿಸಬಲ್ಲರು.












Click it and Unblock the Notifications