'ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭ': ತುಮಕೂರು ಗೆದ್ದ ಸೋಮಣ್ಣ ಮಾತಿನ ಹಿಂದಿನ ಮರ್ಮವೇನು..?
ತುಮಕೂರು, ಜೂನ್ 04: ಹೊರಗಿನ ಅಭ್ಯರ್ಥಿ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದೇ ಭಾವಿಸಿ ಹೆಚ್ಚಿಗೆ ದುಡಿದೆ. ಪರಿಣಾಮವಾಗಿ ಗೆಲುವು ಸಾಧಿಸಿದ್ದೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ವಿ.ಸೋಮಣ್ಣ ಖುಷಿ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸ್ವಲ್ಪ ಹಿನ್ನೆಡೆ ಆಗಿದೆ. ಇಂಡಿಯಾ ಒಕ್ಕೂಟದ ಅಪಪ್ರಚಾರವೇ ಇದಕ್ಕೆ ಕಾರಣ. ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ತೆಗೆಯುತ್ತಾರೆ ಎನ್ನುವ ಅಪಪ್ರಚಾರ ಮಾಡಿದ್ದಾರೆ. ಇದು ಸ್ವಲ್ಪ ಹಿನ್ನೆಡೆಗೆ ಕಾರಣವಾಗಿದೆ ಎಂದರು.

ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜನ ಯಾರು ಯಾರಿಗೆ ಯಾವ ಯಾವ ರೀತಿ ಗೌರವ ಕೊಡಬೇಕೋ ಕೊಟ್ಟಿದ್ದಾರೆ. ಈಗ ನಾವು ಜನರ ನಿರೀಕ್ಷೆಗೆ ತಕ್ಕಂತೆ ಹೆಜ್ಜೆ ಹಾಕಬೇಕು. ದೇವೇಗೌಡರು, ಕುಮಾರಸ್ವಾಮಿ, ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ ಹಾಗೂ ನಮ್ಮ ಕಾರ್ಯಕರ್ತರು ನಾನು ತುಮಕೂರಿನಲ್ಲಿ ನಿಲ್ಲಲು ಕಾರಣ. ಇವರ ಸಹಕಾರದಿಂದಲೇ ನಾನು ಇವತ್ತು ಗೆದ್ದಿದ್ದೇನೆ. ನಾನು ಮೈಸೂರಿಗೆ ತೆರಳಿ ಅಲ್ಲಿಂದ ತುಮಕೂರಿಗೆ ತೆರಳುತ್ತೇನೆ ಎಂದರು.
ರಾಜ್ಯದ ಜನರು ಕೆಲಸಗಾರರಿಗೆ ಯಾವ ರೀತಿ ಗೌರವ ಕೊಡುತ್ತಾರೆ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ನಾವೆಲ್ಲಾ ಜನತಾ ಪಾರ್ಟಿ, ಜನತಾ ದಳದಲ್ಲಿದ್ದವರು. ಹಳೆ ಮೈಸೂರು ಹೊಸ ಮೈಸೂರು ಎನ್ನುವುದಕ್ಕಿಂತ ಈ ಚುನಾವಣೆಯಲ್ಲಿ ಹೆಚ್ಚಾಗಿ ಸಮನ್ವಯತೆ ಪ್ರಮುಖ ಪಾತ್ರವಹಿಸಿದೆ. ತುಮಕೂರಿನಲ್ಲಿ ಆದಂತಹ ಸಮನ್ವಯತೆ ಎಲ್ಲಾ ಕಡೆಗಳಲ್ಲಿಯೂ ಆಗಿದ್ದರೆ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟು ಗೆಲ್ಲುತ್ತಿದ್ದೆವು ಎಂದರು.

ನಾನು ಸಮನ್ವಯತೆಯನ್ನು ಚೆನ್ನಾಗಿ ಬಳಸಿಕೊಂಡೆ. ಹೀಗಾಗಿ ದೇವೇಗೌಡರು, ಕುಮಾರಸ್ವಾಮಿ ಅವರು ಹಾಗೂ ನಮ್ಮ ಪಕ್ಷದ ನೇತಾರರು ಅವರೆಲ್ಲಾ ಕುಳಿತು ಇನ್ನೂ ಕೂಡ ಚರ್ಚೆ ಮಾಡಿದ್ದರೆ, ಇನ್ನೂ ಒಂದಿಷ್ಟು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು.
ಆದರೆ ಈಗ ಇಷ್ಟು ಗೆಲುವು ಆಗಿದೆ. ಸ್ವೀಕರಿಸೋಣ, ಮುಂದಿನ ದಿನಗಳಲ್ಲಿ ಬರುವ ಸವಾಲುಗಳನ್ನು ಎದುರಿಸಬೇಕು ಎಂದರು. ಅಲ್ಲದೇ ನನ್ನ ಗೆಲುವಿಗೆ ಬಿಜೆಪಿಯವರಷ್ಟೇ ಜೆಡಿಎಸ್ ಕಾರ್ಯರ್ತರು ಕೂಡ ದುಡಿದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.












Click it and Unblock the Notifications