ಸೋಮಣ್ಣ ಎಂಬ ಹೆಸರಿನವನಾದ ನಾನು...
ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕರಾದ ವಿ ಸೋಮಣ್ಣ ಅವರು ಇಷ್ಟು ದಿನಗಳ ಕಾಲ ರಾಜ್ಯ ರಾಜಕಾರಣ ನಡೆದುತ್ತಿದ್ದು, ಇದೀಗ ಕೇಂದ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. 2024 ರ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿರುವ ಬಿಜೆಪಿಯ ವಿ.ಸೋಮಣ್ಣ ಇದೀಗ ನರೇಂದ್ರ ಮೋದಿ 3.0 ಸಂಪುಟ ಸೇರುವುದು ಬಹುತೇಕ ನಿಚ್ಚಳವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿ ವಿ ಸೋಮಣ್ಣ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದರು. ಸೋಮಣ್ಣ ಅವರು ಸೋತ ಬಳಿಕ ಲೋಕಸಭಾ ಚುಣಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ನಡೆಸಿ ಗೆಲುವು ಸಾಧಿಸಿದ್ದು, ಇದೀಗ ರಾಜ್ಯದ ಐವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಒಲಿದು ಬಂದಿದ್ದು, ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ವಿ ಸೋಮಣ್ಣ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೊರಗಿನಿಂದ ಬಂದವರಿಗೆ ಜನತೆ ಮಣೆ ಹಾಕಲ್ಲ ಎಂಬ ವಿರೋಧವೂ ಕೇಳಿ ಬರುತ್ತಿತ್ತು. ಇದೀಗ ಗೆಲುವು ಸಾಧಿಸುವ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರು ಗೆದ್ದಿಲ್ಲ ಎಂಬ ಅಪವಾಧವನ್ನು ಅಳಿಸಿಹಾಕಿರುವ ಸೋಮಣ್ಣ 1.75 ಲಕ್ಷ ಭರ್ಜರಿ ಲೀಡ್‌ನೊಂದಿಗೆ ಗೆದ್ದು ಬೀಗಿದ್ದು ಮತ್ತೊಂದು ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ 1952 ರಿಂದ ಈವರೆಗೆ ಗೆದ್ದಿರುವ ಯಾರೊಬ್ಬರಿಗೂ ಸಹ ಕೇಂದ್ರ ಮಂತ್ರಿ ಸ್ಥಾನ ದೊರೆತಿರಲಿಲ್ಲ.ಆದರೆ, ಮೊದಲ ಬಾರಿಗೆ ಗೆಲುವು ಕಂಡ ಸೋಮಣ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ಮಂತ್ರಿ ಸ್ಥಾನ ಒಲಿದು ಬಂದಿದ್ದು, ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ದಾಪುಗಾಲು ಇಟ್ಟಿದ್ದಾರೆ.
ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವ ವಿ ಸೋಮಣ್ಣ (73) ಅವರು ಐದು ದಶಕಗಳಿಗು ಹೆಚ್ಚು ಕಾಲ ಸಾರ್ವಜನಿಕ ಸೇವೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ 24/7 ರಾಜಕಾರಣಿ. ದಕ್ಷಿಣ ಕರ್ನಾಟಕ ಭಾಗದಲ್ಲಿ ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಹೊಂದಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮರಳವಾಡಿಯ ಲೇಟ್ ವೀರಣ್ಣ ಅವರ ಪುತ್ರ ವಿ.ಸೋಮಣ್ಣ ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು. ಇನ್ನೂ 1983ರಲ್ಲಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸೋಮಣ್ಣ 1994ರವರೆಗೆ ಬಿಬಿಎಂಪಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಜೆಡಿಎಸ್ ಮೂಲಕ ರಾಜಕೀಯ ಪ್ರವೇಶಿಸಿದ ವಿ ಸೋಮಣ್ಣ ಐದು ಬಾರಿ ಶಾಸಕರಾಗಿ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಮೂರು ಬಾರಿ ಮಂತ್ರಿ ಆಗಿಯು ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡಿದ್ದರು.ಇನ್ನೂ 1994ರಲ್ಲಿ ಜನತಾಪಕ್ಷದಿಂದ ಬಿನ್ನಿಪೇಟೆ ಕ್ಷೇತ್ರದಿಂದ ಗೆದ್ದು ವಿಧಾನಸೌಧ ಪ್ರವೇಶಿಸಿದ ಸೋಮಣ್ಣ ಮಂತ್ರಿ ಪಟ್ಟವನ್ನ ಗಿಟ್ಟಿಸಿಕೊಂಡರು. ಬಳಿಕ ಪಕ್ಷೇತರರಾಗಿ 1999ರಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಇನ್ನೂ 2004ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಮತ್ತೆ ಬಿನ್ನಿಪೇಟೆಯಿಂದ ಗೆಲುವು ಸಾಧಿಸಿದರು. 2008ರಲ್ಲಿ ಗೋವಿಂದರಾಜನಗರದಿಂದ ಸ್ಪರ್ಧಿಸಿ ಗೆದ್ದ ಸೋಮಣ್ಣ ಆಪರೇಷನ್ ಕಮಲಕ್ಕೆ ಸಿಲುಕಿ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕ್ಷೇತ್ರ ಕಳೆದುಕೊಂಡರು. ಎರಡು ಬಾರಿ ವಿಧಾನಪರಿಷತ್ ಸದಸ್ಯರಾದರು.ಇನ್ನು, 2013ರಲ್ಲಿ ಸೋಲಿ ಕಂಡ ಸೋಮಣ್ಣ, 2018ರಲ್ಲಿ ಮತ್ತೆ ಗೋವಿಂದರಾಜನಗರ ಕ್ಷೇತ್ರದಿಂದ ಗೆದ್ದು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದರು.












Click it and Unblock the Notifications