ತುಮಕೂರಿನ TGMC ಬ್ಯಾಂಕ್‌ನಲ್ಲಿ ಭಾರೀ ಅವ್ಯವಹಾರ: ಆಗಿದ್ದೇನು?
ತುಮಕೂರು, ಮೇ 03: ತುಮಕೂರಿನ ಟಿಜಿಎಂಸಿ ಬ್ಯಾಂಕಿನ 12 ಶಾಖೆಗಳ 20ಕ್ಕೂ ಹೆಚ್ಚು ಖಾತೆಗಳಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ದೂರು ದಾಖಲಾಗಿದೆ. ಈ ದೂರಿನ ಮೇರೆಗೆ ತನಿಖೆ ನಡೆಸಿದ ಸಹಕಾರ ಸಂಘಗಳ ಉಪನಿಬಂಧಕರು, ಬ್ಯಾಂಕಿನಲ್ಲಿ ಅವ್ಯವಹಾರವಾಗಿರುವುದು ದೃಢಪಟ್ಟಿದೆ ಎಂದು ವರದಿ ಸಲ್ಲಿಸಿದ್ದಾರೆ.
ಇದರಿಂದ ಬ್ಯಾಂಕಿಗೆ ಅಪಾರ ನಷ್ಟವಾಗಿದ್ದು, ಆಗಿರುವ ನಷ್ಟವನ್ನು ಬ್ಯಾಂಕಿನ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರಿಂದ ವಸೂಲಿ ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದ್ದು, ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಟಿಜಿಎಂಸಿ ಬ್ಯಾಂಕ್ ಸದಸ್ಯರಾದ ಜಿ.ಎಸ್.ಬಸವರಾಜು ಆಗ್ರಹಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಟಿಜಿಎಂಸಿ ಬ್ಯಾಂಕ್ ನ 12 ಶಾಖೆಗಳ 20ಕ್ಕೂ ಹೆಚ್ಚು ಖಾತೆಗಳಿಂದ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಸಹಕಾರ ಸಂಘಗಳ ನಿಬಂಧಕರು ಹಾಗೂ ಜಂಟಿ ನಿಬಂಧಕರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕೋರಿದ್ದೆ. ಆದರೆ ಇವರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಬ್ಯಾಂಕ್ ಆಡಳಿತ ಮಂಡಳಿ ಜೊತೆಗೆ ಸಹಕಾರ ಸಂಘಗಳ ಅಧಿಕಾರಿಗಳನ್ನು ಸೇರಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ದೂರು ದಾಖಲಿಸಿದ ಲೋಕಾಯುಕ್ತರು, ಟಿಜಿಎಂಸಿ ಬ್ಯಾಂಕ್ ದೂರಿನ ತನಿಖೆ ನಡೆಸಿ ವರದಿ ನೀಡುವಂತೆ ಸಹಕಾರ ಸಂಘದ ನಿಬಂಧಕರಿಗೆ ಆದೇಶ ನೀಡಿದ್ದರು. ಅದರಂತೆ ಸಹಕಾರ ಸಂಘಗಳ ನಿಬಂಧಕರು ಕೋ ಆಪರೇಟಿವ್ ಆಕ್ಟ್ 1959ರ ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸಿ ವರದಿ ನೀಡಲು ತುಮಕೂರು ಉಪ ನಿಬಂಧಕರಿಗೆ ಆದೇಶ ಮಾಡಿದ್ದರು ಎಂದು ಜಿ.ಎಸ್.ಬಸವರಾಜು ಹೇಳಿದ್ದಾರೆ.
ಟಿಜಿಎಂಸಿ ಬ್ಯಾಂಕ್ ಅವ್ಯವಹಾರ ಸಂಬಂಧ 20 ಆರೋಪಗಳ ಪೈಕಿ ಒಂದು ಆರೋಪಕ್ಕೆ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದು, ಉಳಿದ 19 ಅಂಶಗಳ ತನಿಖೆ ನಡೆಸಿ ಲೋಕಾಯುಕ್ತಕ್ಕೆ ಉಪ ನಿಬಂಧಕರು ವರದಿ ಸಲ್ಲಿಸಿದ್ದಾರೆ. ಸಲ್ಲಿಸಿರುವ ವರದಿ ಪ್ರಕಾರ ಜಿ.ಎಸ್.ಬಸವರಾಜು ಟಿಜಿಎಂಸಿ ಬ್ಯಾಂಕ್ ವಿರುದ್ಧ ಮಾಡಿದ್ದ ಎಲ್ಲ ಆರೋಪಗಳು ದೃಢಪಟ್ಟಿದ್ದು, ಬ್ಯಾಕಿನಲ್ಲಿ ಸುಮಾರು 250 ಕೋಟಿ ರೂ.ಗಳಿಗೂ ಹೆಚ್ಚು ಅವ್ಯವಹಾರವಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಇದರಿಂದ ಬ್ಯಾಂಕಿಗೆ ಅಪಾರವಾದ ನಷ್ಟವಾಗಿದ್ದು, ಈ ನಷ್ಟಕ್ಕೆ ಬ್ಯಾಂಕಿನ ಆಡಳಿತ ಮಂಡಳಿ, ಅಧಿಕಾರಿಗಳು, ಸಾಲದ ಉಪಸಮಿತಿ ಸಂಪೂರ್ಣ ಜವಾಬ್ದಾರಿಯಾಗಿದೆ. ಆಗಿರುವ ನಷ್ಟವನ್ನು ನಿಯಮಾನುಸಾರ ಬಡ್ಡಿ ಸಮೇತ ಬ್ಯಾಂಕಿನ ಆಡಳಿತ ಮಂಡಳಿ, ಅಧಿಕಾರಿಗಳಿಂದ ವಸೂಲಿ ಮಾಡಲು ತಿಳಿಸಲಾಗಿದೆ. ಮುಂದೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 69ರ ಅಡಿಯಲ್ಲಿ ಅಧಿಭಾರ ಪ್ರಕರಣ ದಾಖಲಿಸಬೇಕೆಂದು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಟಿಜಿಎಂಸಿ ಬ್ಯಾಂಕಿನ ಅವ್ಯವಹಾರದ ವಿರುದ್ಧದ ನಿರಂತರ ಕಾನೂನು ಹೋರಾಟಕ್ಕೆ ಈ ಮೂಲಕ ಜಯ ದೊರಕಿದೆ. ಬ್ಯಾಂಕ್ ಅವ್ಯವಹಾರದ ವಿರುದ್ಧ ಆರೋಪ ಮಾಡಿ ದೂರು ಸಲ್ಲಿಸಿದ್ದಕ್ಕೆ ಬ್ಯಾಂಕಿನ ನಿಯಮಾವಳಿ ಮೀರಿ ಸದಸ್ಯತ್ವದಿಂದ ತೆಗೆಯಲಾಗಿತ್ತು. ಸದಸ್ಯತ್ವ ತೆಗೆದಿರುವುದರ ವಿರುದ್ಧ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಮಾಡಿದ್ದ ಆದೇಶವನ್ನು ಮಾನ್ಯ ಮಾಡಿ ಕೆಎಟಿಯನ್ನು ನ್ಯಾಯಾಲಯ ರದ್ದುಪಡಿಸಿ, ಟಿಜಿಎಂಸಿ ಬ್ಯಾಂಕಿನಲ್ಲಿ ಸದಸ್ಯತ್ವ ಮುಂದುವರೆಸಬೇಕೆಂದು ಆದೇಶ ಮಾಡಿದೆ ಎಂದು ದೂರುದಾರ ಜಿ.ಎಸ್.ಬಸವರಾಜು ಹೇಳಿದ್ದಾರೆ. ಒಟ್ಟಾರೆಯಾಗಿ ಸದ್ಯ ಟಿಜಿಎಂಸಿ ಬ್ಯಾಂಕ್ ಮೇಲೆ ಬಂದಿರುವ ಆರೋಪದ ಕುರಿತಂತೆ ಸಂಬಂಧಿಸಿದವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications