ಸಿದ್ದು ಸಿಎಂ ರೀತಿ ಕೆಲಸ ಮಾಡಲಿ, ಕಾರ್ಯಕರ್ತರಂತೆ ಅಲ್ಲ: ಡಿವಿಎಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಂತೆ ವರ್ತಿಸಲಿ. ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುವುದು ಬೇಡ. ತುಮಕೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ, ಬಿಜೆಪಿಯ ಡಿ.ವಿ. ಸದಾನಂದ ಗೌಡ ಹೇಳಿಕೆ.
ತುಮಕೂರು, ಜುಲೈ 8: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಕಾಂಗ್ರೆಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಮೊದಲು ಅವರು ಸಿಎಂ ರೀತಿಯಲ್ಲಿ ಕೆಲಸ ಮಾಡಲಿ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರದ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಇತ್ತೀಚೆಗೆ ಕೋಮುವಾದಿಗಳ ದಾಳಿಯಿಂದಾಗಿ ಹಲ್ಲೆಗೊಳಗಾಗಿ, ಶನಿವಾರ ಮೃತಪಟ್ಟ ಶರತ್ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.

ಆನಂತರ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಹರಿಸಿದ ಅವರು, ''ರಾಜ್ಯ ಸರ್ಕಾರದ ಗೃಹ ಇಲಾಖೆಯು ಸಿದ್ದರಾಮಯ್ಯ ಅವರ ಕೈಯ್ಯಲ್ಲಿದೆ. ಮಂಗಳೂರಿನಲ್ಲಿ ಗಲಭೆಗಳಾಗುತ್ತಿರುವ ಹೊತ್ತಿನಲ್ಲೇ ಅವರು, ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಬೇಕಿತ್ತು. ಗಲಭೆ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಸಿಎಂ ಇದ್ಯಾವುದನ್ನೂ ಮಾಡಿಲ್ಲ'' ಎಂದು ಟೀಕಿಸಿದರು.
ಇದೇ ವೇಳೆ, ಈ ಹಿಂದೆ ಗೃಹ ಸಚಿವರಾಗಿದ್ದ ಜಿ. ಪರಮೇಶ್ವರ್ ಅವರನ್ನು ಆ ಸ್ಥಾನದಿಂದ ಓಡಿಸಿ, ಆ ಇಲಾಖೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ ಎಂದು ಸದಾನಂದ ಗೌಡ ಹೇಳಿದರು.












Click it and Unblock the Notifications