Savandurga Trek: ಸಾವನದುರ್ಗ ಚಾರಣ, ಪ್ರವಾಸಿಗರಿಗೆ ಸಿಹಿಸುದ್ದಿ
ರಾಮನಗರ, ಡಿಸೆಂಬರ್ 23: ಸುಮಾರು ನಾಲ್ಕು ತಿಂಗಳ ಬಳಿಕ ಕರ್ನಾಟಕದ ಅರಣ್ಯ ಇಲಾಖೆ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದೆ. ಮಾಗಡಿಯ ಸಾವನದುರ್ಗ ಬೆಟ್ಟದಲ್ಲಿ ಚಾರಣಕ್ಕೆ ಅವಕಾಶವನ್ನು ನೀಡಿದೆ. ಆದರೆ ಪ್ರವಾಸಿಗರು ಚಾರಣ ಕೈಗೊಳ್ಳುವ ಮುನ್ನ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು, ಇದಕ್ಕಾಗಿಯೇ ವೆಬ್‌ಸೈಟ್ ಸಹ ಆರಂಭಿಸಲಾಗಿದೆ. ಸಾವನದುರ್ಗ ಏಷ್ಯಾದ ಅತಿ ಎತ್ತರದ ಏಕಶಿಲಾ ಬೆಟ್ಟವಾಗಿದ್ದು, ನೂರಾರು ಜನರು ಚಾರಣಕ್ಕಾಗಿ ಆಗಮಿಸುತ್ತಾರೆ.
ಅರಣ್ಯ ಇಲಾಖೆ ಹೊಸ ನಿಯಮಗಳ ಪ್ರಕಾರ ಸಾವನದುರ್ಗ ಬೆಟ್ಟದಲ್ಲಿ ಪ್ರತಿದಿನ 300 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶವಿದೆ. ಆನ್‌ಲೈನ್ ಮೂಲಕ ಮೊದಲೇ ನೋಂದಣಿ ಮಾಡಿಕೊಂಡು ಚಾರಣ ಕೈಗೊಳ್ಳಬೇಕು. ಚಾರಣದ ಮೊದಲ ಅವಧಿ ಬೆಳಗ್ಗ 6 ರಿಂದ 10 ಮತ್ತು ಎರಡನೇ ಅವಧಿ ಬೆಳಗ್ಗೆ 9 ರಿಂದ 12 ಆಗಿದೆ.

ಬುಕ್ಕಿಂಗ್, ಶುಲ್ಕದ ವಿವರ: ಕರ್ನಾಟಕದ ಅರಣ್ಯ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಚಾರಣ ಕೈಗೊಳ್ಳಲು ಈಗಾಗಲೇ ಆನ್‌ಲೈನ್ ಮೂಲಕ ನೋಂದಣಿ ಕಡ್ಡಾಯಗೊಳಿಸಿದೆ. ಅದರಂತೆ ಸಾವನದುರ್ಗ ಬೆಟ್ಟದಲ್ಲಿಯೂ ಚಾರಣ ಕೈಗೊಳ್ಳಲು https://aranyavihaara.karnataka.gov.in/ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ನೋಂದಣಿ ಮಾಡಿಕೊಂಡು ಚಾರಣ ಕೈಗೊಳ್ಳುವ ಪ್ರವಾಸಿಗರಿಗೆ ಗೈಡ್‌ಗಳನ್ನು ಸಹ ನಿಗದಿ ಮಾಡಲಾಗಿದೆ. ವಾರದ ದಿನದಲ್ಲಿ ಚಾರಣಕ್ಕೆ ಒಬ್ಬರಿಗೆ 300 ರೂ. ಮತ್ತು ವಾರಾಂತ್ಯದಲ್ಲಿ 400 ರೂ. ದರವನ್ನು ನಿಗದಿ ಮಾಡಲಾಗಿದೆ. 18 ವರ್ಷಕ್ಕಿಂತ ಕೆಳಗಿನವರಿಗೆ ವಾರದ ದಿನ 150 ಮತ್ತು ರಜೆ ದಿನಗಳಲ್ಲಿ 200 ರೂ. ಶುಲ್ಕವಿದೆ. ಪ್ರತಿ 10 ಚಾರಣಿಗರಿಗೆ ಒಬ್ಬರು ಗೈಡ್‌ಗಳು ಇರಲಿದ್ದಾರೆ.
ಅನಧಿಕೃತವಾಗಿ ಯಾರೂ ಸಹ ಬೆಟ್ಟದಲ್ಲಿ ಚಾರಣ ಕೈಗೊಳ್ಳುವಂತಿಲ್ಲ. ನೋಂದಣಿ ಸಮಯದಲ್ಲಿಯೇ ಹೆಸರು, ವಿಳಾಸ, ವಯಸ್ಸು, ಯಾರ ಜೊತೆ ಬಂದಿದ್ದಾರೆ ಎಂಬ ವಿವರ ನೀಡಬೇಕು. ಗೈಡ್‌ಗಳು ಚಾರಣದ ಪೂರ್ತಿ ಜೊತೆ ಇರುವುದರಿಂದ ಚಾರಣಿಗೆ ಸುರಕ್ಷತೆಯ ಕುರಿತು ಸಹ ಗಮನವನ್ನು ನೀಡಲಿದ್ದಾರೆ.
ಈ ಹಿಂದೆ ಚಾರಣ ಬಂದವರು ಕಳೆದು ಹೋದ, ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ನಡೆದಿವೆ. ಆದ್ದರಿಂದ ಅರಣ್ಯ ಇಲಾಖೆ ಪ್ರವಾಸಿಗರ ಸುರಕ್ಷತೆಗಾಗಿ ಈಗ ಹಲವಾರು ಹೊಸ ಕ್ರಮ ಕೈಗೊಂಡಿದೆ. ಬೆಟ್ಟದಲ್ಲಿ ಪ್ರವಾಸಿಗರು ಕಳೆದು ಹೋಗಿ ಸಿಕ್ಕಿ ಹಾಕಿಕೊಳ್ಳುವ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ವೆಬ್‌ಸೈಟ್ ಮಾಹಿತಿ ಪ್ರಕಾರ ಸಾವನದುರ್ಗ ಬೆಟ್ಟದಲ್ಲಿ ಚಾರಣ ಕೆಂಪೇಗೌಡ ವನದಾಮದಲ್ಲಿ ಆರಂಭವಾಗಲಿದೆ. ಕೋಟೆನೆತ್ತಿ ನಂದಿ ಮಂಟಪದ ಬಳಿ ಅಂತ್ಯವಾಗಲಿದೆ. ಒಟ್ಟು 2 ಕಿ. ಮೀ. ಚಾರಣ ಇದಾಗಿದ್ದು, ಸುಮಾರು 3 ಗಂಟೆಯನ್ನು ತೆಗೆದುಕೊಳ್ಳುತ್ತದೆ.
ನೋಂದಣಿ ಮಾಡುವಾಗ ಸಂದರ್ಶಕ 1 (ತಂಡದ ನಾಯಕ) ಹೆಸರು, ಐಡಿ ಕಾರ್ಡ್, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಬೇಕು. ಶುಲ್ಕವನ್ನು ಪಾವತಿ ಮಾಡಿ ಚಾರಣವನ್ನು ಕೈಗೊಳ್ಳಬಹುದಾಗಿದೆ.
ಸುಮಾರು 4 ತಿಂಗಳಿನಿಂದ ಸಾವನದುರ್ಗ ಬೆಟ್ಟದಲ್ಲಿ ಚಾರಣ ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ಮತ್ತು ಪ್ರವಾಸಿಗರಿಗೆ ನಿರಾಸೆಯಾಗಿತ್ತು. ಅರಣ್ಯ ಇಲಾಖೆ ಮಳೆಗಾಲದಲ್ಲಿ ವಿವಿಧ ಬೆಟ್ಟದಲ್ಲಿ ಚಾರಣಕ್ಕೆ ನಿರ್ಬಂಧ ಹೇರಿತ್ತು. ಈಗ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಚಾರಣಕ್ಕೆ ಅವಕಾಶ ನೀಡಿದೆ. ಅಲ್ಲದೇ ಪ್ರತಿದಿನ ಇಷ್ಟು ಜನರು ಮಾತ್ರ ಚಾರಣ ಮಾಡಬೇಕು ಎಂದು ಮಿತಿ ಹೇರಿದೆ. ಆದ್ದರಿಂದ ಚಾರಣಕ್ಕೂ ಮೊದಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.












Click it and Unblock the Notifications